ಅಪಾಯದ ಮೂನ್ಸುಚನೆ ನೀಡಿದರೂ ಕೇಳದೇ ಅರಬ್ಬಿ ಸಮುದ್ರದಲ್ಲಿ ಹುಚ್ಚಾಟ ನಡೆಸಿದ ಪ್ರವಾಸಿಗರ ಮೇಲೆ ರಕ್ಷಣಾ ಸಿಬ್ಬಂದಿ ಲಾಠಿ ಬೀಸಿದ್ದಾರೆ. ಲಾಠಿ ಏಟು ಬೀಳುತ್ತಲೇ ನೀರಿನಲ್ಲಿ ತೇಲುತ್ತಿದ್ದವರು ಅರೆ ಬರೆ ಬಟ್ಟೆಯಲ್ಲಿ ಓಡಿ ದಡ ಸೇರಿದ್ದಾರೆ.
ಕಾರವಾರ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದ ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅದಾಗಿಯೂ ಕೆಲ ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು-ಮಸ್ತಿಯಲ್ಲಿ ನಿರತರಾದ್ದಾರೆ. ನಿಯಮ ಮೀರಿದವರಿಗೆ ಅಲ್ಲಿರುವ ರಕ್ಷಣಾ ಸಿಬ್ಬಂದಿ ತಿಳಿ ಹೇಳುತ್ತಿದ್ದು, ಅವರ ಮಾತು ಕೇಳದೇ ನೀರಿನ ಆಳಕ್ಕೆ ತೆರಳಿದವರಿಗೆ ಅನಿವಾರ್ಯವಾಗಿ ಲಾಠಿ ಬೀಸಿದ್ದಾರೆ.
ಅಲೆಗಳಿಗೆ ಎದುರಾಗಿ ಈಜುತ್ತಿದ್ದವರಿಗೆ ಮೊದಲು ಮೊದಲು ರಕ್ಷಣಾ ಸಿಬ್ಬಂದಿ ಸೀಟಿ ಊದಿ ಕರೆದಿದ್ದಾರೆ. `ಮುಂದೆ ಅಪಾಯವಿದ್ದು, ಅಲ್ಲಿ ಹೋಗಬೇಡಿ\’ ಎಂದು ಮನವಿ ಮಾಡಿದ್ದಾರೆ. ಆದರೆ, ಅವರ ಸೂಚನೆ ಪಾಲಿಸದ ಪ್ರವಾಸಿಗರು ಇನ್ನಷ್ಟು ಮುಂದೆ ಹೋಗಿದ್ದು ಆಗ ಸಮುದ್ರದಲ್ಲಿದ್ದವರನ್ನು ರಕ್ಷಣಾ ಸಿಬ್ಬಂದಿ ಎಳೆದು ತಂದಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಲಾದ ರಕ್ಷಣಾ ಸಿಬ್ಬಂದಿ ಪ್ರವಾಸಿಗರಿಗೆ ಬುದ್ದಿ ಹೇಳಿದ್ದು, ಪೆಟ್ಟುಬಿದ್ದ ನಂತರ ಪ್ರವಾಸಿಗರು ಮನೆ ದಾರಿ ಹಿಡಿದರು.