ಶಿರಸಿ: ಖೂರ್ಸೆಯ ರಾಮಚಂದ್ರ ಚಲವಾದಿ (40) ಎಂಬಾತ ಗದ್ದೆಗೆ ಹೋದವ ಕಾಡಿನ ಬೇರಿಗೆ ದೇಹ ಸಿಕ್ಕಿಸಿಕೊಂಡು ಸಾವನಪ್ಪಿದ್ದಾನೆ.
ಜುಲೈ 6ರಂದು ಮಧ್ಯಾಹ್ನ ಊಟ ಮಾಡಿದ ರಾಮಚಂದ್ರ ಗದ್ದೆಗೆ ಹೋಗಿ ಬರುವುದಾಗಿ ಆತನ ಪತ್ನಿ ಚೈತ್ರಾಗೆ ಹೇಳಿದ್ದ. ಗದ್ದೆಯ ಬೇಲಿಗೆ ಗೂಟ ಮಾಡುವುದಿದ್ದು, ಆ ಕೆಲಸ ನಿರ್ವಹಿಸುವ ಬಗ್ಗೆ ತಿಳಿಸಿದ್ದ. ಬೇಲಿ ಕಂಬ ಕಡಿಯಲು ಕಲ್ಲುಹೊಳೆಗೆ ತೆರಳಿದ್ದ ಈತ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಚೈತ್ರಾ ಆತನ ತಮ್ಮನ ಬಳಿ ವಿಷಯ ತಿಳಿಸಿದ್ದಳು.
ಮರುದಿನ ಐದಾರು ಜನ ಸೇರಿ ಹುಡುಕಿದರೂ ಆತ ಪತ್ತೆಯಾಗಿರಲಿಲ್ಲ. ಜುಲೈ 8ರಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಬಾಬು ಲೋಪಿಸ್ ಎಂಬಾತನಿಗೆ ಹಳ್ಳದ ಬೇರುಗಳ ನಡುವೆ ಆತನ ಶವ ಕಾಣಿಸಿದೆ. ಕಲ್ಲುಹೊಳೆ ಕಡೆ ಗಿಡ ಕಡಿಯಲು ಹೋದವ ಜಾರಿ ಬಿದ್ದಿದ್ದು, ನೀರಿನ ರಭಸಕ್ಕೆ ಬೇರಿನ ಅಡಿ ಸಿಲುಕಿಕೊಂಡು ಅಲ್ಲಿಯೇ ಸಾವನಪ್ಪಿದ ಬಗ್ಗೆ ಶಂಕಿಸಲಾಗಿದೆ.