ಕುಮಟಾ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಎಲ್ಲಾ ಕಡೆಯಿಂದ ನೀರು ನುಗ್ಗುತ್ತಿದೆ. ಇಲ್ಲಿಗೆ ಆಗಮಿಸುವವರು ಛತ್ರಿ ಹಿಡಿದು ಒಳಗೆ ಪ್ರವೇಶಿಸುವ ಸನ್ನಿವೇಶ ಎದುರಾಗಿದೆ.
ಈ ಬಸ್ ನಿಲ್ದಾಣ ನಿರ್ಮಿಸಿ 30 ವರ್ಷ ಕಳೆದಿದ್ದು, ನಿರ್ವಹಣೆ ಸರಿಯಾಗಿಲ್ಲ. ವಾಣಿಜ್ಯ ಮಳಿಗೆ, ವಾಹನ ನಿಲುಗಡೆ ಶುಲ್ಕದಿಂದ ಇಲಾಖೆಗೆ ಆದಾಯವಿದೆ. ಆದರೂ, ನಿರ್ವಹಣೆಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಶುದ್ದ ಕುಡಿಯುವ ನೀರು, ಶೌಚಾಲಯ ಸೇರಿ ಹಲವು ಸಮಸ್ಯೆಗಳು ಇಲ್ಲಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಪ್ರಸ್ತುತ ಬಸ್ ನಿಲ್ದಾಣದ ಗೋಡೆ, ಅಡ್ಡ ಹಾಕಿದ ಬೀಮ್\’ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೇಲ್ಛಾವಣಿಯ ತಗಡು ಸಹ ತುಂಡಾಗಿದೆ. ಇದರಿಂದ ಪ್ರಯಾಣಿಕರು ಆತಂಕದಲ್ಲಿಯೇ ಇಲ್ಲಿಗೆ ಆಗಮಿಸುತ್ತಿದ್ದಾರೆ.