`ಹಳೆ ಕಾಲದಲ್ಲಿ ಗಿಡಮರ, ಮಳೆಯೂ ಹೆಚ್ಚಿತ್ತು. ಈ ಗುಡ್ಡ ಕುಸಿತ ಆಗ ಇರಲಿಲ್ಲ. ಈಚೆಗಿನ ಗುಡ್ಡಗಳ ಕುಸಿತಕ್ಕೆ ಗಿಡ ಮರಗಳು ಕಡಿಮೆ ಆಗಿದ್ದೇ ಪ್ರಮುಖ ಕಾರಣ\’ ಎಂದು ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಭಾನುವಾರ ಚಾತುರ್ಮಾಸ್ಯದ ಆಶೀರ್ವಚನ ನೀಡಿದ ಅವರು `ಹೆದ್ದಾರಿ ಪಕ್ಕದಲ್ಲಿ ಕಡಿದ ಪ್ರಮಾಣದಲ್ಲಿಯೇ ಗಿಡ-ಮರಗಳನ್ನು ಬೆಳೆಸಬೇಕು. ಅರಣ್ಯ ಇಲಾಖೆ, ಜನರೂ ಇದರ ನೇತ್ರತ್ವವಹಿಸಬೇಕು\’ ಎಂದು ಕರೆ ನೀಡಿದರು. `ನಮಗೆ ಮಾರ್ಗದರ್ಶನ ಮಾಡಿದವರನ್ನು ಭಕ್ತಿ ಭಾವದಲ್ಲಿ ನೆನೆಯಬೇಕು. ಆ ಮೂಲಕ ಅವರಲ್ಲಿ ದಿವ್ಯ ಶಕ್ತಿ ನೋಡಬೇಕು\’ ಎಂದರು. `ಅರಿವೇ ಗುರು ಎಂಬುದು ಇದೆ. ಅರಿವು ಗುರು ಹೌದು. ಅರಿವು ಬಂದವನೇ ಗುರು. ಅರಿವನ್ನು ಮೂಡಿಸುವವನೇ ಗುರು. ಸರಿಯಾಗಿ ಕರೆದುಕೊಂಡು ಹೋಗುವ ಅರಿವು ಅನುಭವಗಳಿಂದ ಬರುತ್ತದೆ. ತನ್ನ ಅರಿವೇ ತನ್ನ ಗುರು ಅಂದುಕೊoಡವನಿಗೆ ಸಾಧನೆಗೆ ಬಹಳ ತಡ ಆಗುತ್ತದೆ. ಅದಕ್ಕಾಗಿ ಅರಿವಿನ ಸಾಕಾರಮೂರ್ತಿಯಾದವನ ಆಶ್ರಯ ಪಡೆಯಬೇಕು\’ ಎಂದರು.
ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಆನಂದಬೋಧೇoದ್ರ ಸರಸ್ವತೀ ಸ್ವಾಮೀಜಿ `ಗುರುವನ್ನು ಆತ್ಮತತ್ವದ ಲಾಭಕ್ಕೆ ಮಾಡಬೇಕು. ಮೋಕ್ಷಕ್ಕಾಗಿ, ಶ್ರೇಯಸ್ಸಿಗಾಗಿ ಗುರುವನ್ನು ಆರಾಧಿಸಬೇಕು. ನಿವೃತ್ತಿ ಮಾರ್ಗದಲ್ಲಿ ಇದ್ದವನಿಗೆ ಮೋಕ್ಷ ಆಗುತ್ತದೆ. ಸಾಂಸಾರಿಕನಿಗೆ ಲೌಕಿಕ ಕಾಮನೆಗಳೂ, ಮೋಕ್ಷ ಸಾಧನೆ ಕೂಡ ಆಗುತ್ತದೆ. ಗುರುವಿಗಿಂತ ದೊಡ್ಡವರು ಯಾರೂ ಇಲ್ಲ\’ ಎಂದರು.