ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಿ ಆರ್ ಜಡ್ ನಿಯಮಗಳನ್ನು ಮೀರಿ ಅನೇಕ ರೆಸಾರ್ಟ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಗುಡ್ಡಗಳನ್ನು ಕಡಿದು ಗಣಿಕಾರಿಕೆ ನಡೆಸಲಾಗಿದೆ.
ತೋಟ ಅಭಿವೃದ್ಧಿ, ಮಣ್ಣು – ಮರಳು ಸಾಗಾಟಕ್ಕಾಗಿ ಅಗತ್ಯಕ್ಕಿಂತಲೂ ಅಧಿಕವಾಗಿ ಪರಿಸರ ನಾಶವಾಗಿದೆ. ಈ ಎಲ್ಲಾ ಅವೈಜ್ಞಾನಿಕ ಕೆಲಸದ ಪರಿಣಾಮವಾಗಿ ಪ್ರಕೃತಿ ಮುನಿಸಿಕೊಂಡಿದ್ದು, ಮಳೆಗಾಲದಲ್ಲಿ ನೆರೆ ಪ್ರವಾಹ, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಗೆ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದೆ. ಇಲ್ಲಿನ ಪ್ರಕೃತಿ ಹೇಗಿದೆಯೋ ಹಾಗೇ ಉಳಿಸಿಕೊಂಡರೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಬರುವ ಪ್ರವಾಸಿಗರಿಗೆ ಐಷಾರಾಮಿ ಸೌಲತ್ತು ಒದಗಿಸುವುದಕ್ಕಾಗಿ ಕರಾವಳಿ ಭಾಗದಲ್ಲಿ ಜನರ ಒಳಿತಿಗಾಗಿ ಮಾಡಿರುವ ನಿಯಮಗಳನ್ನು ಉಲ್ಲಂಗಿಸಲಾಗಿದೆ. ಇದರ ಪರಿಣಾಮವಾಗಿ ಇದೀಗ ಅಲ್ಲಲ್ಲಿ ಸಣ್ಣಪುಟ್ಟ ಗುಡ್ಡ ಕುಸಿತದ ಅನುಭವಗಳಾಗುತ್ತಿದೆ. ಗೋಕರ್ಣದ ರಾಮತೀರ್ಥ ದೇವಾಲಯ, ಭದ್ರಕಾಳಿ ಕಾಲೇಜು ಮೊದಲಾದ ಸ್ಥಳದಲ್ಲಿ ಮಣ್ಣು ಕುಸಿದಿದೆ.
ಮಲೆನಾಡು ಭಾಗದಲ್ಲಿ ಇದೀಗ ಭತ್ತದ ಗದ್ದೆಗಳೇ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಅಡಿಕೆ ತೋಟ ವ್ಯಾಪಿಸಿದ್ದು, ಇದಕ್ಕೆ ಅಗತ್ಯವಿರುವ ಮಣ್ಣನ್ನು ಬೆಟ್ಟ ಕಡಿದು ತರಲಾಗುತ್ತಿದೆ. ಬೆಟ್ಟ ಕಡಿದ ಕಡೆಗಳೆಲ್ಲವೂ ಮಣ್ಣು ಕುಸಿತ ಉಂಟಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಬೆಟ್ಟದ ಮಣ್ಣನ್ನು ತೆಗೆದಿರುವುದು ಕುಸಿತಕ್ಕೆ ಪ್ರಮುಖ ಕಾರಣ. ತಗ್ಗು ಪ್ರದೇಶದಲ್ಲಿನ ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು, ಬೆಳೆಗೆ ಕೊಳೆ ರೋಗ ವ್ಯಾಪಿಸಿದೆ. ನೀರನ್ನು ಹೊರ ಹಾಕುವುದು ರೈತರಿಗೆ ಸಮಸ್ಯೆಯಾಗಿದೆ. ಆಹಾರ ಬೆಳೆಯಾದ ಭತ್ತ ಪ್ರದೇಶವಾಗಿದ್ದರೆ ಈ ಪ್ರಮಾಣದಲ್ಲಿ ನೀರು ನಿಂತರೂ ಸಮಸ್ಯೆ ಆಗುತ್ತಿರಲಿಲ್ಲ ಎಂಬುದು ಅನುಭವಿಗಳ ಮಾತು.