ಭೌಗೋಳಿಕವಾಗಿ ವಿಸ್ತಿರ್ಣವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಪ್ರದೇಶ ಹೆಚ್ಚಾಗಿದ್ದು, ಮಳೆಗಾಲದಲ್ಲಿ ವಿದ್ಯುತ್ ತಂತಿ ಹಾಗೂ ಕಂಬ ಮುರಿದು ಬೀಳುವುದು ಸಾಮಾನ್ಯ. ಈ ರೀತಿ ಮುರಿದ ಕಂಬ ಸರಿಪಡಿಸಲು ವಿದ್ಯುತ್ ಗುತ್ತಿಗೆದಾರರಿಗೆ ಜವಾಬ್ದಾರಿವಹಿಸುವ ಹೆಸ್ಕಾಂ ನಿರ್ವಹಣಾ ವೆಚ್ಚವನ್ನು ಸರಿಯಾಗಿ ಪಾವತಿಸುತ್ತಿಲ್ಲ!
`ಗುಡ್ಡಗಾಡು ಪ್ರದೇಶದಲ್ಲಿ ವಿದ್ಯುತ್ ಕಂಬವನ್ನು ತಲೆಯ ಮೇಲೆ ಹೊತ್ತು ಸಾಗಿಸಬೇಕಿದೆ. ಇದರಿಂದ ಕೂಲಿ ವೆಚ್ಚವೇ ದುಬಾರಿಯಾಗಿದ್ದು, ತುರ್ತು ಕಾಮಗಾರಿ ನಡೆಸಿದಾಗ ಹೆಚ್ಚುವರಿಯಾಗಿ ಅದರ ಮೊತ್ತ ಪಾವತಿಯಾಗುತ್ತಿತ್ತು. ಆದರೆ, 2023-24ರಲ್ಲಿ ಈ ಹಣ ಪಾವತಿ ಆಗದ ಕಾರಣ ಕಾಮಗಾರಿ ನಿರ್ವಹಿಸುವುದು ಕಷ್ಟ\’ ಎಂದು ಯಲ್ಲಾಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
`ಈಗಿನ ದರ ಪಟ್ಟಿ ಜೊತೆ ತುರ್ತು ಕಾಮಗಾರಿ ವೆಚ್ಚ ಎಂದು ಶೇ 25 ಹಾಗೂ ಪ್ರಾದೇಶಿಕ ಹೆಚ್ಚುವರಿ ಕಾಮಗಾರಿ ವೆಚ್ಚ ಶೇ 45ನ್ನು ಸೇರಿಸಬೇಕು\’ ಎಂದು ಗೋಪಾಲಕೃಷ್ಣ ಕರುಮನೆ ಹಾಗೂ ಮಕ್ಬೂಲ್ ಹಲವಾಯಿಘರ ಒತ್ತಾಯಿಸಿದರು. ಈ ವೇಳೆ ಹಾಜರಿದ್ದ ವಿದ್ಯುತ್ ಗುತ್ತಿಗೆದಾರರಾದ ಬಾಲಚಂದ್ರ ಭಟ್, ರಿಗನ್ ಡಿಸೋಜಾ, ಶ್ರೀನಿವಾಸ ಪಟಗಾರ, ಸೈಯದ್ ಮಕ್ಬೂಲ್, ಮಹಮ್ಮದ್ ಜಾಫರ್, ಗಣಪತಿ ಕರುಮನೆ, ಗಣಪತಿ ಹೆಗಡೆ, ಮಾರುತಿ ಗೋವೇಕರ ಸಹ ವಿದ್ಯುತ್ ಗುತ್ತಿಗೆದಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ರಮಾಕಾಂತ ನಾಯ್ಕ ಅವರ ಮೂಲಕ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ರವಾನಿಸಿದರು.