ಉಳುವರೆ ಎಂಬುದು ಒಂದು ಪುಟ್ಟ ಊರು. ಸುತ್ತಲಿನ ಕಾಡು, ನಡುವೆ ಹರಿಯುವ ನದಿ ಆ ಊರಿನ ಸಂಪತ್ತು ಹೆಚ್ಚಿಸಿತ್ತು. ಅಲ್ಲಿನ ಜನ ಪೃಕೃತಿಯ ಮದ್ಯೆ ಸಂತೋಷವಾಗಿದ್ದರು. ಕೃಷಿ, ಕೂಲಿ, ಮೀನುಗಾರಿಕೆ ನಡೆಸಿ ಬದುಕುಕಟ್ಟಿಕೊಂಡಿದ್ದರು. ಆದರೆ, ವಾರದ ಹಿಂದೆ ನಡೆದ ಶಿರೂರು ಗುಡ್ಡ ಕುಸಿತ ಅಲ್ಲಿ ಒಂದು ಊರು ಇತ್ತು ಎಂಬ ಕುರುಹನ್ನು ಸಹ ಉಳಿಸಿಲ್ಲ.
ಶಿರೂರು ಗುಡ್ಡ ಕುಸಿತದ ಪರಿಣಾಮ ಉಳುವರೆ ಎಂಬ ಊರು ಸಂಪೂರ್ಣ ಸ್ಮಶಾನವಾಗಿ ಬದಲಾಗಿದೆ. ಗಂಗಾವಳಿ ನದಿಯ ಅಂಚಿನ ಶಿರೂರ ಗ್ರಾಮದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಅಂಗಡಿ ನೆಲಸಮವಾಗಿದ್ದು, ಈ ವೇಳೆ ಗುಡ್ಡದ ಇಡೀ ಮಣ್ಣು ಗಂಗಾವಳಿ ಹೊಳೆಗೆ ಧುಮುಕಿದ್ದರಿಂದ ಅಲ್ಲಿನ ಅಲೆಗಳು ಉಳುವರೆ ಊರನ್ನು ನಾಶಮಾಡಿವೆ.
ಉಳುವರೆ ಗ್ರಾಮದ ಮುಡುಕೋಣ ಗೌಡರ ಕೊಪ್ಪ ಹಾಗೂ ಅಂಬಿಗರ ಕೊಪ್ಪಕ್ಕೆ ನೀರು ಆವರಿಸಿ ಸಣ್ಣು ಹನುಮಂತ ಗೌಡ ಎಂಬಾತರನ್ನು ಬಲಿ ಪಡೆದಿದೆ. ಆ ಊರಿನಲ್ಲಿದ್ದ 25ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿವೆ. ಸಣ್ಣು ಹನುಮಂತ ಗೌಡ ಅವರ ಜೊತೆ ನೀಲಾ ಮುದ್ದು ಗೌಡ, ತುಳಸಪ್ಪ ಗೌಡ, ನಾಗಿ ಬೊಮ್ಮ ಗೌಡ, ಗಣಪತಿ ಬೊಮ್ಮ ಗೌಡ, ಗೋವಿಂದ ಕೃಷ್ಣ ಗೌಡ, ಮೋಹನ ನಾರಾಯಣ ಅಂಬಿಗ ಎಂಬಾತರ ಮನೆಗಳು ಕಣ್ಮರೆಯಾಗಿದೆ.
ಅಲ್ಲಲ್ಲಿ ಮನೆಯ ಅಡಿಪಾಯ ಮಾತ್ರ ಕಾಣುತ್ತಿದ್ದು, ಉಳಿದ 18 ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. 20 ಅಡಿ ಎತ್ತರದ ಬೃಹತ್ ನೀರಿನ ಪರ್ವತ ಒಮ್ಮೆಲೇ ಗ್ರಾಮಕ್ಕೆ ನುಗ್ಗಿದ ಪರಿಣಾಮ ಮನೆಯ ಮುಂಭಾಗದ ತೋಟ, ವ್ಯವಸಾಯ ಮಾಡಿದ ಸಸಿಗಳು ಹಾಗೂ ಮರಗಿಡಗಳು ನೆಲಕ್ಕೆ ಅಪ್ಪಳಿಸಿದೆ. ಬುಡ ಸಮೇತ ಧರೆಗುರುಳಿದ ಮರಗಳು ಈಗಾಗಲೇ ಸಾವನಪ್ಪಿದ್ದು, ಅಲ್ಲಿನವರಿಗೆ ಇದೀಗ ಆದಾಯವೇ ಇಲ್ಲವಾಗಿದೆ.
ಉಳುವರೆ ಗ್ರಾಮದ ಅಂಬಿಗರು ತಮ್ಮ ಬಳಿ ಇರುವ ದೋಣಿ ಹಾಗೂ ಪಾತಿದೋಣಿ ನಂಬಿ ದಿನನಿತ್ಯದ ಬದುಕು ಸಾಗಿಸುತ್ತಿದ್ದರು. ನಿತ್ಯ ಮೀನು ಹಿಡಿದು ಮಾರಿದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈ ಅವಗಢ ಅಂಬಿಗರ ಬದುಕನ್ನೇ ಸರ್ವನಾಶ ಮಾಡಿದ್ದು, 40ಕ್ಕೂ ಅಧಿಕ ದೋಣಿ ಹಾಗೂ 20ಕ್ಕೂ ಅಧಿಕ ಪಾತಿದೋಣಿ ನುಚ್ಚುನೂರಾಗಿದೆ. ದೋಣಿಗಳನ್ನು ನಂಬಿದ್ದ ಮೀನುಗಾರರ ಬದುಕು ಮೂರಾಬಟ್ಟೆಯಾಗಿದೆ.