ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದ ಜನ ಗುರುವಾರ ಪ್ರತಿಭಟಿಸಿದರು. ನಂತರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಮಟಾ ತಹಸೀಲ್ದಾರ ಸತೀಶ ಗೌಡ, ಲೋಕೋಪಯೋಗಿ ಅಧಿಕಾರಿ ಎಂ ಪಿ ನಾಯ್ಕ ಮನವಿ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು. `ಸೇತುವೆಯ ಕಂಬ ಇನ್ನಷ್ಟು ಕುಸಿದಂತೆ ತಡೆಯಲು ಕ್ರಿಬ್ಸ್ಗಳನ್ನು ಕೊಡಲಾಗಿದೆ. ಮಳೆ ಸ್ವಲ್ಪ ಕಡಿಮೆ ಆದ ನಂತರ ಕುಸಿತ ತಡೆಯಲು ಕ್ರಮ ಜರುಗಿಸುತ್ತೇವೆ. ಹೊಸ ಸೇತುವೆ ನಿರ್ಮಾಣಕ್ಕೂ ಪ್ರಸ್ತಾವನೆ ಕಳುಹಿಸುತ್ತೇವೆ\’ ಎಂದು ಇಂಜಿನಿಯರ್ ಹೇಳಿದರು. ಸಂತೆಗುಳಿ ಗ್ರಾ.ಪಂ ಅಧ್ಯಕ್ಷ ಮಹೇಶ ನಾಯ್ಕ, ಮಾಜಿ ಅಧ್ಯಕ್ಷ ವಿನಾಯಕ ಭಟ್ಟ, ಸೊಪ್ಪಿನಹೊಸಳ್ಳಿ ಗ್ರಾ.ಪಂ ಅಧ್ಯಕ್ಷೆ ಶೈಲಾ ನಾಯ್ಕ ಇತರರಿದ್ದರು.