ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ ಹಲ್ಲೆ ನಡೆದಿದೆ.
ನಾಗಮ್ಮ ಬೋಳು ಮೊಗೇರ್ ಹಾಗೂ ಲಲಿತಾ ತಿಮ್ಮಪ್ಪ ಮೊಗೇರ್ ಅವರು ಅರ್ಜಿ ಸಲ್ಲಿಸಿದ ಪ್ರಕಾರ ಜುಲೈ 26ರಂದು ಸರ್ಕಾರಿ ಭೂ ಮಾಪಕ ಅನುಪ ಶೆಟ್ಟಿ ತೆರಳಿದ್ದರು. ಹೀಗೆ ಹೋಗುವ ಮುನ್ನ ನಿಯಮಾನುಸಾರ ಅಕ್ಕಪಕ್ಕದ ಜಮೀನಿನ 12 ವಾರಸುದಾರರಿಗೂ ಅವರು ನೋಟಿಸ್ ಜಾರಿ ಮಾಡಿದ್ದರು. ಸರ್ವೆ ನಡೆಸುವ ವೇಳೆ ನೋಟಿಸ್ ಪಡೆದ 4 ಜನ ಆಗಮಿಸಿದ್ದು, ಆ ಪೈಕಿ ಜಯಂತ ನಾಗಪ್ಪ ಮೊಗೇರ್ ಎಂಬಾತರು ಸರ್ವೆಗೆ ಅಡ್ಡಪಡಿಸಿ ಭೂ ಮಾಪಕ ಅನೂಪ ಶೆಟ್ಟಿ ಅವರ ಕೆನ್ನೆಗೆ ಹೊಡೆದಿದ್ದಾರೆ. ಜೊತೆಗೆ ಕೈ ಹಿಡಿದು ತಿರುಚಿದ್ದರಿಂದ ಅನೂಪ ಶೆಟ್ಟಿ ಆಸ್ಪತ್ರೆ ಸೇರಿದ್ದಾರೆ.
ಕುಮಟಾ ಗಾಂಧಿನಗರದ ಅನೂಪ ಶೆಟ್ಟಿ 7 ವರ್ಷಗಳಿಂದ ಭೂ ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. `ಸರ್ವೆ ನಿಲ್ಲಿಸಿ ಇಲ್ಲಿಂದ ಹೊರಡಬೇಕು. ಇಲ್ಲಿಂದ ಹೋಗದೇ ಇದ್ದರೆ ಕೊಲೆ ಮಾಡುವೆ\’ ಎಂದು ಸಹ ಜಯಂತ ನಾಗಪ್ಪ ಮೊಗೇರ್ ಬೆದರಿಕೆ ಒಡ್ಡಿ ಬಗ್ಗೆ ಆಸ್ಪತ್ರೆಯಿಂದಲೇ ಅನೂಪ್ ಶೆಟ್ಟಿ ಪೊಲೀಸ್ ದೂರು ನೀಡಿದ್ದಾರೆ.