ಯಲ್ಲಾಪುರ: ಶುಕ್ರವಾರ ಕಳಚೆಯ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ ರಸ್ತೆ ಕುಸಿದ ಬೆನ್ನಲ್ಲೆ ಶನಿವಾರ ಇನ್ನಷ್ಟು ಭೂ ಕುಸಿತ ಉಂಟಾಗಿದೆ.
2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾದ ಪ್ರದೇಶದಲ್ಲಿ ಮತ್ತೆ ಕುಸಿತವಾಗಿದ್ದು, ಮಾನಿಗದ್ದೆ ಕುಂಬ್ರಿಯ ಜನಾರ್ಧನ ಹೆಬ್ಬಾರ್ ಅವರ ತೋಟ ನೆಲಕಚ್ಚಿದೆ. ಇದರೊಂದಿಗೆ ಅಂಬಡೆಕೇರಿ ಸೂರ್ಯನಾರಾಯಣ ಭಟ್ಟ ಅವರ ಮನೆ ಹಿಂದೆಯೂ ಭೂಮಿ ಕುಸಿದಿದೆ. ಇತ್ಲಮನೆ ಜಿ ಎಸ್ ಭಟ್ಟ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಹೆಬ್ಬರಕುಂಬ್ರಿಯ ಆರ್ ಪಿ ಹೆಗಡೆ ಅವರ ಕೊಟ್ಟಿಗೆಯ ಗೋಡೆ ಕುಸಿತಿದೆ. ಅಲ್ಲಲ್ಲಿ ಅಡಿಕೆ ಮರಗಳು ಸಹ ಉರುಳಿಬಿದ್ದಿದೆ.
2021ರಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತ ಈ ಊರಿನಲ್ಲಿ ಆಗಿತ್ತು. ಮತ್ತೆ ಕುಸಿಯುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದರು. ಈ ಹಿನ್ನಲೆ ಊರಿನವರನ್ನು ಸ್ಥಳಾಂತರಿಸಬೇಕು ಎಂದು ಜನ ಬೇಡಿಕೆ ಇಟ್ಟಿದ್ದರು. ಆದರೆ, ಈವರೆಗೂ ಕಳಚೆ ಗ್ರಾಮದವರಿಗೆ ಪುನರ್ವಸತಿಯೂ ಸಿಕ್ಕಿಲ್ಲ. ಪರಿಹಾರವೂ ದೊರೆತಿಲ್ಲ.