ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಯಿಗೂ ಒಂದು ಸ್ಮಾರಕವಿದೆ. ಕುಮಟಾದಲ್ಲಿ ಕುದುರೆಗೆ ಸ್ಮಾರಕವಿದೆ. ಈ ಸ್ಮಾರಕಗಳಿಂದ ಜನರಿಗೆ ಉಪಯೋಗದ ಬದಲು ಉಪದ್ರವ ಆಗುತ್ತಿರುವುದೇ ಹೆಚ್ಚು!
ಭಟ್ಕಳದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ನಾಯಿಯೊಂದನ್ನು ಸಾಕಿದ್ದ. ಆ ನಾಯಿ ಅಲ್ಲಿನ ಹಸುವಿಗೆ ಕಚ್ಚಿದ್ದು, ಆ ಹಸು ಸಾವನಪ್ಪಿತ್ತು. ಇದರಿಂದ ರೊಚ್ಚಿಗೆದ್ದ ಗೋಪ್ರೇಮಿಗಳು ಕಲ್ಲಿನಿಂದ ಹೊಡೆದು ಆ ನಾಯಿಯನ್ನು ಸಾಯಿಸಿದ್ದರು. ಆ ನಾಯಿ ನೆನಪಿಗೆ ಬ್ರಿಟಿಷ್ ಅಧಿಕಾರಿ ಸ್ಮಾರಕ ನಿರ್ಮಿಸಿದ!
ಇದೇ ರೀತಿ ಕುಮಟಾದ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಎದುರು ಎರಡು ಸಮಾಧಿಗಳಿವೆ. ಇದು ಬ್ರಿಟಿಷ್ ಅಧಿಕಾರಿಗಳಿಬ್ಬರ ಸಮಾಧಿಯಾಗಿದ್ದು, ಜನ ಕುದುರೆ ಸ್ಮಾರಕ ಎಂದೂ ಕರೆಯುತ್ತಾರೆ. ಪುರಾತತ್ವ ಇಲಾಖೆ ಈ ಸ್ಮಾರಕಗಳ ಸ್ಮರಣೆ ಮಾಡುತ್ತಿದೆ. ನಿಯಮಗಳ ಪ್ರಕಾರ ಐತಿಹಾಸಿಕ ಮಹತ್ವಗಳಿಲ್ಲದ ಈ ಸ್ಮಾರಕಗಳ 200 ಮೀ ದೂರ ಯಾವುದೇ ಕಟ್ಟಡ ನಿರ್ಮಾಣ ಮಾಡುವ ಹಾಗಿಲ್ಲ!
ಭಾರತಕ್ಕೆ ಬ್ರಿಟಿಷ್ ದಾಸ್ಯದಿಂದ ಮುಕ್ತಿ ದೊರೆತು 7 ದಶಕ ಕಳೆದರೂ ಬ್ರಿಟಿಷ್ ಅವಧಿಯ ಸಮಾಧಿ ಸುತ್ತ ಜಮೀನು ಹೊಂದಿದವರಿಗೆ ಅಲ್ಲಿ ಉತ್ತಮ ಮನೆ ನಿರ್ಮಿಸಿಕೊಳ್ಳುವ ಹಾಗೂ ಆ ಮನೆಯನ್ನು ನವೀಕರಣ ಮಾಡಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿಲ್ಲ!