ಶಿರಸಿ: `ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ\’ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಅವರು ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುಂದ ಸೀಮೆ, ಛಾಪಖಂಡ ಭಾಗಿಯ ಶಿಷ್ಯರು ಸಲ್ಲಿಸಿದ ಗುರು ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.
`ಪ್ರತಿಯೊಂದಕ್ಕೂ ನಮ್ಮ ಮನಸ್ಸು ಮುಖ್ಯ ಕಾರಣ. ಅದನ್ನು ನಿಗ್ರಹಿಸಿದರೆ ಎಲ್ಲವನ್ನೂ ನಿಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ ಬರುತ್ತದೆ. ನಮ್ಮನ್ನು ಧರ್ಮಾಚರಣೆಯಲ್ಲಿ ತೊಡಗಿಸುತ್ತದೆ\’ ಎಂದರು.
`ಇAದ್ರಿಯಗಳ ಆಕರ್ಷಣೆಯನ್ನು ತಡೆಗಟ್ಟುವಲ್ಲಿ ಪ್ರಯತ್ನ ಬೇಕು. ಅದನ್ನು ತಡೆಗಟ್ಟಿದರೆ ತಪಸ್ಸಾಗುತ್ತದೆ. ನಮ್ಮ ಜೀವನದ ನಿಶ್ರೇಯಸ್ಸಿಗೂ ಕಾರಣವಾಗುತ್ತದೆ ಎಂದರು. ಕಿರಿಯ ಶ್ರೀಗಳಾದ ಆನಂದಬೋಧೇoದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ನೀಡಿದ್ದರು.
ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ತಮ್ಮಣಗಿ, ಶಿವಾನಂದ ಪಾಟೀಲ, ಮಾತೃಮಂಡಳಿಯ ಪ್ರಮುಖರಾದ ಸೀತಾ ದಾನಗೇರಿ, ವಿಶಾಲಾಕ್ಷಿ ಭಟ್ ಪಟೋಳಿ ಉಪಸ್ಥಿತರಿದ್ದರು.