ಶಿರಸಿ: `ಅರಣ್ಯ ಭೂಮಿ ಹಕ್ಕು ಕಾಯಿದೆಗೆ ತಿದ್ದುಪಡಿ ವಿಷಯವಾಗಿ ವಿಧಾನ ಮಂಡಲ ಸದನ ಇತ್ತೀಚೆಗೆ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿದ್ದು, ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದರಿಂದ ಭೂಮಿ ಹಕ್ಕಿನ ಕಾಯಿದೆಗೆ ತಿದ್ದುಪಡಿ ಅಗತ್ಯವಿಲ್ಲ\’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
`ಕಾಯಿದೆ ಮತ್ತು ನಿಯಮಾವಳಿ ಜಾರಿಗೆ ಬಂದು 17 ವರ್ಷಗಳ ನಂತರ ಜಿಲ್ಲೆಯಲ್ಲಿ ಈ ಕಾನೂನು ಅಡಿಯಲ್ಲಿ ಈ ಹಿಂದೆ ಸಾಗುವಳಿ ಹಕ್ಕು ಪತ್ರ ನೀಡಿದ ನಂತರ ಈಗ ಕಾಯಿದೆ ತಿದ್ದುಪಡಿ ಕುರಿತು ಪ್ರಸ್ತಾಪವಾಗುತ್ತಿರುವುದು ವಿಷಾದಕರ\’ ಎಂದು ಅವರು ಹೇಳಿದರು. `ಅರಣ್ಯ ವಾಸಗಳ 3 ತಲೆಮಾರಿನ ವೈಯಕ್ತಿಕ ಅತಿಕ್ರಮಣದ ದಾಖಲೆಯನ್ನು ಮಂಜೂರಿಗೆ ಪರಿಗಣಿಸುವುದು ತಪ್ಪು. ಅತಿಕ್ರಮಣ ಪ್ರದೇಶ 3 ತಲೆಮಾರಿನ ಜನ ವಸತಿ ಪ್ರದೇಶ ಎಂಬ ದಾಖಲೆಯ ಆಧಾರದ ಮೇಲೆ ಹಕ್ಕು ಪತ್ರ ನೀಡಬಹುದು ಎಂದು 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿರ್ದೇಶಿಸಿದ್ದು, ಮಂಜೂರಿಗಿರುವ ಕಾನೂನು ತೊಡಕುಗಳನ್ನು ನಿವಾರಿಸಿದೆ\’ ಎಂದು ಅವರು ಕಾನೂನಾತ್ಮಕ ಅಂಶವನ್ನು ವಿಶ್ಲೇಷಿಸಿದರು.
ಅಧ್ಯಯನ ಅವಶ್ಯ:
ಅರಣ್ಯ ಭೂಮಿ ಹಕ್ಕಿಗೆ ಆಡಳಿತಾತ್ಮಕ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸುವ ಹಾಗೂ ಆಳವಾದ ಕಾನೂನು ಅಧ್ಯಯನ ಜನ ಪ್ರತಿನಿಧಿಗಳಿಗೆ ಅವಶ್ಯ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.