ಯಲ್ಲಾಪುರ: ಯಾವುದೇ ವಿದ್ಯಾರ್ಹತೆ, ವೈದ್ಯಕೀಯ ಪರಿಣತಿ ಇಲ್ಲದಿದ್ದರೂ ಕಿರವತ್ತಿಯ ಮನೆಯೊಂದರಲ್ಲಿ ಆಸ್ಪತ್ರೆ ನಡೆಸುತ್ತಿದ್ದವರಿಗೆ ಸೋಮವಾರ ಆರೋಗ್ಯಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಕಲಿ ವೈದ್ಯನ ವಿರುದ್ಧ ಕ್ರಮ ಜರುಗಿಸಿದ್ದಾರೆ.
ನೇಮಿಣಿಗಲ್ಲಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಬಗ್ಗೆ ದೂರು ಕೇಳಿ ಬಂದಿದ್ದು, ಈ ಹಿನ್ನಲೆ ಅಧಿಕಾರಿಗಳು ತಪಾಸಣೆ ನಡೆಸಿದರು. ಆ ಆಸ್ಪತ್ರೆ ನೋಂದಣಿ ಸಹ ಆಗಿರಲಿಲ್ಲ. ವೈದ್ಯ ಎನಿಸಿಕೊಂಡವನಿಗೆ ಕನಿಷ್ಟ ವಿದ್ಯಾರ್ಹತೆಯೂ ಇರಲಿಲ್ಲ. ಹೀಗಾಗಿ ಆ ಆಸ್ಪತ್ರೆ ಎನಿಸಿಕೊಂಡ ಮನೆಗೆ ಅಧಿಕಾರಿಗಳು ಬೀಗ ಜಡಿದರು.
ಇದಾದ ನಂತರ ಕಿರವತ್ತಿಯ ಗುರುಪ್ರಸಾದ ಕ್ಲಿನಿಕ್, ಕೀರ್ತಿ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಅಲ್ಲಿಯೂ ಸಮಸ್ಯೆ ಕಾಣಿಸಿತು. ತಾಂತ್ರಿಕ ಪರಿಣತಿ ಇಲ್ಲದವರನ್ನು ಔಷಧ ವಿತರಣೆ, ಡಯಾಬಿಟಿಸ್ ಹಾಗೂ ಬಿಪಿ ತಪಾಸಣೆಗೆ ಸಿಬ್ಬಂದಿಯಾಗಿ ನೇಮಿಸಿಕೊಂಡಿರುವುದು ಗಮನಕ್ಕೆ ಬಂದಿತ್ತು. ಆಸ್ಪತ್ರೆಗಳಲ್ಲಿ ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುತ್ತಿರಲಿಲ್ಲ. ಇಲ್ಲಿ ಬಳಸಿದ ಸೂಜಿ, ಸಿರಿಂಜ್, ಕಾಟನ್, ಸಲಾಯಿನ್ ಬಾಟಲ್, ಕೆಥೆಟರ್, ಖಾಲಿ ಅಂಪಲ್\’ಗಳನ್ನು ನೇರವಾಗಿ ಕಸದ ವಾಹನಕ್ಕೆ ನೀಡುತ್ತಿದ್ದರಿಂದ ಸಮಸ್ಯೆಯಾಗಿತ್ತು. ಹೀಗಾಗಿ ಅಶುಚಿತ್ವ, ತ್ಯಾಜ್ಯ ವಿಲೆವಾರಿ ಸಮಸ್ಯೆ ಹಾಗೂ ಸರ್ಕಾರಿ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ನೀಡಿ ಆ ಆಸ್ಪತ್ರೆಗಳಿಗೂ ಅಧಿಕಾರಿಗಳು ಬೀಗ ಹಾಕಿದರು.