ಯಲ್ಲಾಪುರ ಹಾಗೂ ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಜನ ಜುಲೈ 30ರ ಮಂಗಳವಾರ ಹೆಸ್ಕಾಂ ಗ್ರಿಡ್\’ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಯಲ್ಲಾಪುರದ ಇಡಗುಂದಿ, ಮಾವಿನಮನೆ ಗ್ರಾಮ ಪಂಚಾಯತದ ಜನ ಹಾಗೂ ಅಂಕೋಲಾ ತಾಲೂಕಿನ ಸುಂಕಸಾಳ, ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯವರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದರು.
ಈ ಭಾಗದ 40ಕ್ಕೂ ಅಧಿಕ ಊರುಗಳಿಗೆ ಕಳೆದ ಎರಡು ತಿಂಗಳಿನಿoದ ಸರಿಯಾದ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ. ಈ ಹಿನ್ನಲೆ ಊರಿನವರೆಲ್ಲ ಸೇರಿ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆಯ ಕರೆ ನೀಡಿದ್ದರು. ಪ್ರತಿಭಟನೆ ನಡೆಸುವುದಾಗಿ ಸಹ ಸೂಚಿಸಿದ್ದರು. ಆದರೂ, ಗ್ರಾಮಸ್ಥರ ಅಳಲನ್ನು ಹೆಸ್ಕಾಂ ಅಧಿಕಾರಿಗಳು ಆಲಿಸಿರಲಿಲ್ಲ. ಈ ಹಿನ್ನಲೆ ಊರಿನವರೆಲ್ಲ ಸೇರಿ ಜುಲೈ 30ರಂದು ಧರಣಿ ನಡೆಸಿದರು.
`ಪ್ರತಿ ವರ್ಷ ಮಳೆಗಾಲ ಪೂರ್ವದಲ್ಲಿ ಲೈನ್ ನಿರ್ವಹಣೆ ಬಗ್ಗೆ ಗಮನಹರಿಸಬೇಕು. ಅಗತ್ಯ ಸಿಬ್ಬಂದಿಯನ್ನು ಈ ಭಾಗಕ್ಕೆ ನೇಮಿಸಬೇಕು. ಗ್ರಾಹಕರ ಸಮಸ್ಯೆ ಆಲಿಸಲು ಯೋಗ್ಯ ಅಧಿಕಾರಿ ಬೇಕು. ಅರಬೈಲ್, ಡಬ್ಗುಳಿ, ಗುಳ್ಳಾಪುರ, ಕೊಡ್ಲಗದ್ದೆ, ಚುಕ್ಕುಮನೆ ಗ್ರಾಮದ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು\’ ಎಂಬುದನ್ನು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಚಿತ್ರ ಮಾಹಿತಿ: ಅಕ್ಷಯ ಶೆಟ್ಟಿ