ಕಾರವಾರ: ಬಿಣಗಾದ ಎನ್ ಎಸ್ ಎನ್ ಕಂಪನಿಯಲ್ಲಿ ಕೆಲಸ ಮಾಡುವ ಸುನೀಲ ವಿಷ್ಣು ಗೋವೇಕರ್ (42) ಎಂಬಾತರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಕೇಸಿ ಐಲರ್ಡ ಎಂಬಾಕೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ತಿಳಿಸಿ, ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾಳೆ.
ಹೋಟೆಗಾಳಿ ಬಳಿಯ ಅಸ್ನೋಟಿ ಪಿಪ್ಪನಗಿರಿಯ ಸುನೀಲ ಗೋವೇಕರ್ ಫೇಸ್ಬುಕ್ ನೋಡುವಾಗ ಕೇಸಿ ಐಲರ್ಡ ಎಂಬಾಕೆಯ ಪರಿಚಯವಾಗಿತ್ತು. ಆಕೆಯ ಜೊತೆ ಸುನೀಲ್ ಅತ್ಯಂತ ಸಲುಗೆಯಿಂದ ಇದ್ದರು. ತನ್ನ ಮೊಬೈಲ್ ನಂ ಹಂಚಿಕೊAಡಿದ್ದ ಕೇಸಿ ಐಲರ್ಡ ಸುನೀಲರನ್ನು ವಾಟ್ಸಪ್\’ಗೆ ಆಮಂತ್ರಿಸಿದ್ದಳು. ಅಲ್ಲಿ ಹಣ ದುಪ್ಪಟ್ಟು ಮಾಡುವ ವಿದ್ಯೆ ಕಲಿಸುವ ಬಗ್ಗೆ ಹೇಳಿಕೊಂಡಿದ್ದಳು.
ಆನ್ಲೈನ್ ಅಪ್ಲಿಕೇಶನ್\’ವೊಂದನ್ನು ಡೌನ್ಲೋಡ್ ಮಾಡಿಸಿ, ಅದರಲ್ಲಿ ಹಣ ಹೂಡುವಂತೆ ಹಿಂದೆ ಬಿದ್ದಿದ್ದಳು. ಆಕೆಯ ಮಾತು ನಂಬಿದ ಸುನೀಲ್ ಹಂತ ಹಂತವಾಗಿ ಒಟ್ಟು 1184300ರೂಪಾಯಿ ಹೂಡಿಕೆ ಮಾಡಿದ್ದರು. ಇದಾದ ನಂತರ ಮತ್ತೆ ಹೂಡಿಕೆ ಮಾಡುವಂತೆ ತಿಳಿಸಿದ್ದು, ಸುನೀಲ್ ಬಳಿ ಹಣ ಇರಲಿಲ್ಲ. ಆಗ ಅಲ್ಲಿದ್ದ ಎಲ್ಲಾ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡ ಕೇಸಿ ಐಲರ್ಡ ಸುನೀಲರಿಗೆ ಮೋಸ ಮಾಡಿದ್ದು, ನಂತರ ಆ ಅಪ್ಲಿಕೇಶನ್ನಿಂದಲೂ ಅವರನ್ನು ಹೊರದಬ್ಬಿದ್ದಾಳೆ. ಹಣ ಕಳೆದುಕೊಂಡ ಸುನೀಲ್ ಜುಲೈ 29ರಂದು ಆ ಹಣ ಪಡೆಯಲು ಪೊಲೀಸರ ಮೊರೆ ಹೋಗಿದ್ದಾರೆ.