ಕುಮಟಾ: `ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದಿಂದ ಬರುವ ಸೌಲಭ್ಯ ಅತ್ಯಂತ ಕಡಿಮೆ. ಈ ಬಗ್ಗೆ ವಿಧಾನಸಭೆಯಲ್ಲಿ ಕೂಗಾಡಿದರೂ ಯಾವುದೇ ಪ್ರಯೋಜನವಾಗಿಲ್ಲ\’ ಎಂದು ಶಾಸಕ ದಿನಕರ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸರಸ್ವತಿ ಪಿಯು ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು `ನಾನು ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತೇನೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಧ್ವನಿ ಎತ್ತಿ ಸರ್ಕಾರವನ್ನು ಎಬ್ಬಿಸಬೇಕು\’ ಎಂದು ಮನವಿ ಮಾಡಿದರು. `ಜಿಲ್ಲೆಯ ಕುರಿತು ಕಾಳಜಿ ಇರುವವರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಮಾಧ್ಯಮಗಳು ಸಹ ಅಭಿವೃದ್ಧಿಗೆ ಕೈ ಜೋಡಿಸಬೇಕು\’ ಎಂದರು.