ಕುಮಟಾ: ತಹಶೀಲ್ದಾರ್ ಪ್ರವೀಣ ಕರಾಂಡೆ ಅವರನ್ನು ನಿಪ್ಪಾಣಿಗೆ ವರ್ಗ ಮಾಡಿದ ಸರ್ಕಾರ ಹೊಸ ತಹಶೀಲ್ದಾರರ ನೇಮಕಕ್ಕೆ ಆಸಕ್ತಿ ತೋರಿಲ್ಲ. ಹೀಗಾಗಿ ತಹಶೀಲ್ದಾರರ ಖಾತೆಯಲ್ಲಿರುವ ಹಣ ಸಂತ್ರಸ್ತರ ಖಾತೆಗೆ ಜಮಾ ಆಗಿಲ್ಲ.
ಮಳೆ ಹಾನಿ ಹಾಗೂ ನೆರೆ ನಡುವೆ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಂತ್ರಸ್ತರ ಪರಿಹಾರ ವಿತರಣೆಗೆ ಅಡ್ಡಿಯಗಿದೆ. ಮಳೆ ಕಾರಣದಿಂದ ತಾಲೂಕಿನಲ್ಲಿ 50ಕ್ಕೂ ಅಧಿಕ ಮನೆ ಮುರಿದಿದ್ದು, ಮನೆಯೊಳಗೆ ನೀರು ನುಗ್ಗಿ ಸಾಮಗ್ರಿ ಕೊಚ್ಚಿಹೋದ ಪ್ರಕರಣಗಳು ನೂರಾರು. ಸರ್ಕಾರ ಮನೆಯೊಳಗೆ ನೀರು ನುಗ್ಗಿದರೆ 5 ಸಾವಿರ ಹಾಗೂ ಮನೆ ಮುರಿದು ಬಿದ್ದರೆ 1.50 ಲಕ್ಷ ಪರಿಹಾರ ನೀಡುತ್ತಿದೆ. ಆದರೆ, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಈ ಮೊತ್ತ ಪಾವತಿ ಆಗಿಲ್ಲ. ಸದ್ಯ ಮಟ್ಟಿಗೆ ಪ್ರಭಾರಿ ತಹಶೀಲ್ದಾರ್ ಆಗಿ ಗ್ರೇಡ್-2 ತಹಶೀಲ್ದಾರ್ ಸತೀಶ್ ಗೌಡ ನೆರೆ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಆದರೆ, ಪರಿಹಾರ ಹಣ ವಿತರಿಸಲು ಅವರಿಗೆ ಅಧಿಕಾರವಿಲ್ಲ.