ಕೊಳಲಿನಿಂದ ಹೊರಹೊಮ್ಮುವ ಸ್ವರದ ಮಾಧುರ್ಯಕ್ಕೂ ಮಿಗಿಲಾದ ಮಾಧುರ್ಯ ಹೊರಡಿಸುವ ಮಧುರಾತಿಮಧುರ ಕೊರಳಿನ ಒಡೆಯರು ಹರಿಮನೆ ಕೃಷ್ಣ ಭಾಗವತರು.
ಶ್ರುತಿ ಏರಿಸಿದಂತೆ ಹೆಚ್ಚಾಗುವ ಸ್ವರದ ಇಂಪು, ತಮಗಿಂತಲೂ ಹೆಚ್ಚು ವಯಸ್ಸಾದ, ಜಾಗರೂಕತೆಯಿಂದ ಕಾಯ್ದುಕೊಂಡಬoದಿರುವ ಹಾರ್ಮೋನಿಯಂ ಪೆಟ್ಟಿಗೆ ತೆಗೆದು ಶ್ರುತಿ ಇಟ್ಟು ಮೊದಲ ಪದ್ಯ ಹಾಡುವಾಗಲೇ ಕೇಳುಗರನ್ನೂ ಅಪ್ಪಟ ಯಕ್ಷಗಾನ ವಾತಾವರಣದೊಳಗೆ ತಂದುಬಿಡುವುದು ಅವರೊಳಗಿನ ಕಲೆ. ಭಾವನಾತ್ಮಕ ಪದ್ಯ ಹಾಡುವಾಗ ಅಗಾಧ ತನ್ಮಯತೆ, ಸಂಪೂರ್ಣ ಸಮರ್ಪಣೆ, ಶ್ರದ್ಧೆಯಿಂದ ತಮ್ಮ ಪ್ರದರ್ಶನ ನೀಡುವ ಪ್ರಾಮಾಣಿಕತೆ ಅವರಲ್ಲಿ ಎದ್ದು ತೋರುತ್ತದೆ.
ಯಲ್ಲಾಪುರ ತಾಲೂಕಿನ ತೇಲಂಗಾರಿನ ಹರಿಮನೆ ಎಂಬಲ್ಲಿ ವಾಸವಿರುವ ಭಾಗವತರು ಉತ್ತಮ ಕೃಷಿಕರು. ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅವರಿಗೆ ಅತೀವ ಆಸಕ್ತಿ. ಮೊದಲು ಮದ್ದಳೆಗಾರಿಕೆಯನ್ನು ಅಭ್ಯಾಸಮಾಡಿನಂತರ ಭಾಗವತಿಕೆಯತ್ತ ಹೊರಳಿದವರು. ಅದ್ಭುತ ಸ್ವರ ಸಂಪತ್ತು ಇದ್ದ ಕಾರಣ ಕಡಿಮೆ ಅವಧಿಯಲ್ಲಿ ಯಲ್ಲಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಹೆಚ್ಚೆಚ್ಚು ಅವಕಾಶ ಪಡೆಯುತ್ತ ಹರಿಮನೆ ಭಾಗವತರು ಎಂದು ಗುರುತಿಸಿಕೊಂಡರು.
ಕಾರವಾರ – ಧಾರವಾಡ ಆಕಾಶವಾಣಿಗಳಲ್ಲಿ ಅವಕಾಶವಾದಾಗ ಬಿಡುವಿಲ್ಲದ ಕೃಷಿಚಟುವಟಿಕೆ ಮತ್ತು ತಾಯಿಯ ಅನಾರೋಗ್ಯದ ನಡುವೆಯು 1987ರಲ್ಲಿ ಬಚಗಾರು ಮೇಳದಲ್ಲಿ ಒಂದು ತಿರುಗಾಟ ಕೂಡ ಮಾಡಿದರು. 53ವರ್ಷಗಳಷ್ಟು ಸುದೀರ್ಘ ಕಾಲದ ಕಲಾಸೇವೆ ಭಾಗವತರದ್ದು. ಯಾವುದೇ ನಿರೀಕ್ಷೆ ಇಲ್ಲದ ಅವರದ್ದು ಈಗಲೂ ಅದೇ ಉತ್ಸಾಹ.. ಅದೇ ಉಮೇದು.. ಅದೇ ಪ್ರಾಮಾಣಿಕತೆ…
ಕೃಫೆ: ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ.