ಯಲ್ಲಾಪುರ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ.
ಅನೇಕರು ಅತ್ಯಂತ ಉತ್ಸಾಹದಿಂದ ರಕ್ತದಾನ ಮಾಡಿ ಕಷ್ಟದಲ್ಲಿದ್ದವರ ಜೀವ ಕಾಪಾಡಿದ ಸಂತೃಪ್ತಿ ವ್ಯಕ್ತಪಡಿಸಿದರು. ಈ ವೇಳೆ ಕೆಲವರು ತಮ್ಮ ಆಪ್ತರಿಗೆ ತುರ್ತು ರಕ್ತಬೇಕಾಗಿದ್ದ ಅವಧಿಯಲ್ಲಿ ಅಪರಿಚಿತರು ಆಗಮಿಸಿ ಸಹಾಯ ಮಾಡಿದನ್ನು ನೆನೆದು ಭಾವುಕರಾದರು. ದೃಷ್ಟಿದೋಷ ಹೊಂದಿದವರು ಕಣ್ಣಿನ ತಪಾಸಣೆಗೆ ಒಳಗಾಗಿದ್ದು, ಕೆಲವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಸಂಘಟಕರು ಘೋಷಿಸಿದರು. ಅಗತ್ಯವಿದ್ದವರಿಗೆ ರಿಯಾಯತಿ ದರದಲ್ಲಿ ಕನ್ನಡಕವನ್ನು ಒದಗಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸತೀಶ್ ಕಟ್ಟಿಗೆ ಅವರ ಸ್ಮರಣಾರ್ಥ ಗುರುವಾರ ಅಡಿಕೆ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಇದಕ್ಕೆ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರ ಹಾಗೂ ಡಾ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯವರು ಇದಕ್ಕೆ ಸಹಕಾರ ನೀಡಿದರು. ಅಡಿಕೆ ವ್ಯಾಪಾರಸ್ಥರ ಸಂಘ, ವಿಶ್ವದರ್ಶನ ಸೇವಾ ಹಾಗೂ ಸುದರ್ಶನ ಸೇವಾ ಪ್ರತಿಷ್ಠಾನದವರು ಸಂಘಟಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ನೇತ್ರದಾನ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸಲಾಯಿತು.