
ಜೊಯಿಡಾ: ಎರಡು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗಾಯಗೊಂಡವರನ್ನು ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಯಿತು.
ಜುಲೈ 31ರಂದು ಪೆಪರ್ ಮಿಲ್ನಲ್ಲಿ ಕೆಲಸ ಮಾಡುವ ದಾಂಡೇಲಿ ಹಾಲಿಮಡ್ಡಿಯವರಾದ ಶ್ಯಾಮರಾವ ಹಳಗೆಕರ್ ಎಂಬಾತರು ಸಂಗಮೇಶ ಚೊಳಗೆ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ರಾಮನಗರ ಬಸ್ ನಿಲ್ದಾಣ ಕಡೆಯಿಂದ ಓಂಕಾರ ಪಾಟೀಲ ಎಂಬಾತರನ್ನು ಬೈಕ್ ಮೇಲೆ ಕೂರಿಸಿಕೊಂಡು ಬರುತ್ತಿದ್ದ ಬಾಬು ಶಳ್ಕೆ ಎಂಬಾತರ ಬೈಕ್ ಡಿಕ್ಕಿಯಾಗಿದೆ. ಇದರಿಂದ ರಾಮನಗರದ ಮೌಂಟ್ ಕಾರ್ಮೇಲ್ ತಿರುವಿನಲ್ಲಿ ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ನಂತರ ಎಲ್ಲರೂ ಸೇರಿ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರೇ ಇಲ್ಲ!
ಇದನ್ನು ಅರಿತ ಗೌಂಡಿ ಕೆಲಸ ಮಾಡುವ ಕುಂಬೇಲಿಯ ಕಾನು ಶೆಳ್ಕೆ ಗಾಯಗೊಂಡವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಿ, ಪ್ರಕರಣದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.