ಕಾರವಾರ: `ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಜನರ ಮನಸ್ಸು ಪರಿವರ್ತಿಸಿದ ಅಪರೂಪದ ಗುರು ಡಾ. ಮಹಾಂತ ಶಿವಯೋಗಿ ಸ್ವಾಮಿಗಳು\’ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
`12 ನೇ ಶತಮಾನದಿಂದ ಅನೇಕ ಮಂದಿ ಶರಣರು, ಮಹಾ ಪರುಷರು, ಸಾಧು ಸಂತರು, ಸಾರ್ವಜನಿಕರು ತಮ್ಮ ಬದುಕನ್ನು ಹೇಗೆ ಪರಿಪೂರ್ಣವಾಗಿ ಹಾಗೂ ಸಮಾಜದ ಒಳಿತಿಗಾಗಿ ಯಾವ ರೀತಿಯಲ್ಲಿ ಬಳಸಬೇಕು ಎಂಬ ಬಗ್ಗೆ ತಿಳಿಸಿದ್ದಾರೆ. ಆದರೆ ಇವರೆಲ್ಲರ ನಡುವೆ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಮನೆ ಮನೆಗಳಿಗೆ ತೆರಳಿ ವ್ಯಸನಗಳ ಬಗ್ಗೆ ಅರಿವು ಮೂಡಿಸಿ, ಅವರಲ್ಲಿನ ದುಶ್ಚಟಗಳ ಸಂಗ್ರಹಕ್ಕೆ ಇಡೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಲಕ್ಷಾಂತರ ಜನರನ್ನು ದುಶ್ಚಟಗಳಿಂದ ಬಿಡಿಸಿದ ಹಿರಿಮೆ ಡಾ. ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ\’ ಎಂದರು.
`ಸಾರ್ವಜನಿಕರು ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ದುಶ್ಚಟಗಳಿಂದ ದೂರವಿದ್ದಷ್ಟು ಉತ್ತಮ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆದರಿಂದ ವ್ಯಸನ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗದೇ ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕು\’ ಎಂದರು.