ಹೊನ್ನಾವರ: ಪೋಡಿ ಸೇರಿದಂತೆ ಸರ್ಕಾರಿ ಕಚೇರಿಯಲ್ಲಿನ ಕೆಲಸಕ್ಕೆ ತೆರಳಿದವರಿಗೆ `ನಾಳೆ ಬಾ\’ ಎಂಬ ಉತ್ತರ ಸಿಗುತ್ತಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಿ ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಭೂದಾಖಲೆಗಳ ಕಚೇರಿಯಲ್ಲಿ ಪಹಣಿ ಪತ್ರಿಕೆಗೆ ಸಂಬoಧಪಟ್ಟ ಕೆ.ಡಿ.ಟಿ ಮತ್ತು ನಕ್ಷೆ ಇರಬೇಕು. ಆ ನಕ್ಷೆ ಮತ್ತು ಕೆ.ಡಿ.ಟಿಗೆ ಅನುಗುಣವಾಗಿ ಪಹಣಿ ಪತ್ರಿಕೆ ಇರಬೇಕು ಎಂಬುದು ನಿಯಮಾವಳಿ. ಆದರೆ, ಜನ ತಮ್ಮ ಪಹಣಿ ಮತ್ತು ಕೆ.ಡಿ.ಟಿ ಇಟ್ಟು 11ಇ ನಕ್ಷೆ ಅಥವಾ ಪೋಡಿಗಾಗಿ ಅರ್ಜಿ ಸಲ್ಲಿಸುವಾಗ ಕ್ಷೇತ್ರಕ್ಕೆ ಅನುಗುಣವಾಗಿ ಪ್ರತಿಯೊಂದು ಪಹಣಿಗೆ ಕನಿಷ್ಟ 1500 ರೂಪಾಯಿ ಹಣ ಪಡೆಯಲಾಗುತ್ತದೆ. ಆದರೆ, ಕೆಲಸ ಮಾತ್ರ ಆಗುವುದಿಲ್ಲ\’ ಎಂದು ಅವರು ವಿವರಿಸಿದರು.
`ಪಹಣಿ ಪತ್ರಿಕೆಯ 11 ಇ ನಕ್ಷೆಗಾಗಿ ಇಲ್ಲವೇ ಪೋಡಿಗಾಗಿ ಹಣ ಭರಣ ಮಾಡಿ ಅರ್ಜಿ ಸಲ್ಲಿಸಿರುವಾಗ ನಕ್ಷೆ ಇಲ್ಲವೆಂದು ಸರ್ವೆ ಇಲಾಖೆ ಅರ್ಜಿ ವಿಲೆಗೆ ತರುವುದು ಖಂಡನೀಯ. ಭೂ ಮಾಪನ ಮತ್ತು ಭೂ ದಾಖಲೆಗಳ ಕಚೇರಿಗೆ ಜನ ಸಾಮಾನ್ಯರು ತಮ್ಮ ಭೂಮಿಯ ಪಹಣಿ ಪತ್ರಿಕೆ ಪೋಡಿಗಾಗಿ ಹಾಗೂ 11ಇ ನಕ್ಷೆಗಾಗಿ ಹಣ ಭರಣ ಮಾಡಿ ಅರ್ಜಿ ಸಲ್ಲಿಸಿರುವಾಗ ಸರ್ವೆ ಇಲಾಖೆ ನಕ್ಷೆ ಇಲ್ಲವೆಂದು ಅರ್ಜಿದಾರರ ಅರ್ಜಿಯನ್ನು ವಿಲೆ ಮಾಡುತ್ತಿದ್ದು, ಅರ್ಜಿದಾರರು ಕಟ್ಟಿದ ಹಣಕ್ಕೆ ಅನ್ಯಾಯವಾಗುತ್ತಿದೆ\’ ಎಂದವರು ದೂರಿದರು.