ಹೊನ್ನಾವರ: ಗೇರುಸೊಪ್ಪಾ ವಿದ್ಯುತ್ ನಿಗಮದ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಹಾಗೂ ಮಹಿಮೆ ಗ್ರಾಮದ ಲೈನ್ಮೇನ್ ಪ್ರಾಂಸಿಸ್ ರೋಡಿಗ್ರಿಸ್ ಸೇರಿ ಕಂಚಿಬೀಳು ಗಣೇಶ ನಾಯ್ಕರನ್ನು ಪುಸಲಾಯಿಸಿ ಅವರನ್ನು ವಿದ್ಯುತ್ ಕಂಬ ಹತ್ತಿಸಿದ್ದು, ವಿದ್ಯುತ್ ಶಾಕ್ ತಗುಲಿ ಅವರು ಗಾಯಗೊಂಡಿದ್ದಾರೆ.
ಮಹಿಮೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸರಬರಾಜು ಸರಿಯಿರಲಿಲ್ಲ. ಈ ಬಗ್ಗೆ ವಿದ್ಯುತ್ ನಿಗಮಕ್ಕೆ ಸ್ಥಳೀಯರು ದೂರಿದ್ದರು. ಜುಲೈ 1ರಂದು ಸಹ ಆ ಗ್ರಾಮದ ತಿಮ್ಮಪ್ಪ ನಾಯ್ಕ ಅವರು ನಿಗಮದ ಅಧಿಕಾರಿ ವಿನಾಯಕ ನಾಯ್ಕ\’ಗೆ ಫೋನ್ ಮಾಡಿ ಸಮಸ್ಯೆ ವಿವರಿಸಿದ್ದರು. ಊರಿನವರೆಲ್ಲ ಸೇರಿ ತಂತಿ ಕೆಳಗಿನ ರಂಬೆ-ಕೊAಬೆ ಕಡಿದರೆ ವಿದ್ಯುತ್ ಸಮಸ್ಯೆ ಕಡಿಮೆಯಾಗುವ ಬಗ್ಗೆ ವಿನಾಯಕ ನಾಯ್ಕ ತಿಳಿಸಿದ್ದು, ಈ ಕೆಲಸಕ್ಕಾಗಿ ಲೈನ್ಮೇನ್ ಪ್ರಾಂಸಿಸ್ ರೋಡಿಗ್ರಿಸ್\’ರನ್ನು ಕಳುಹಿಸುವ ಭರವಸೆ ನೀಡಿದ್ದರು.
ಅದರ ಪ್ರಕಾರ ಜುಲೈ 1ರಂದು ಊರಿನ ಕುಮಾರ ಹೆಗಡೆ, ಮಂಜುನಾಥ ನಾಯ್ಕ ಹಾಗೂ ಇನ್ನೊಬ್ಬ ಮಂಜುನಾಥ ನಾಯ್ಕ ಜೊತೆಗೆ ಕೇರಿಯ ಜನರೆಲ್ಲ ಸೇರಿ ತಂತಿ ಕೆಳಗೆ ಹರಡಿಕೊಂಡಿದ್ದ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿದ್ದರು. ಮಧ್ಯಾಹ್ನದ ವೇಳೆ ಅಲ್ಲಿಗೆ ಆಗಮಿಸಿದ ಲೈನ್ಮೇನ್ ಪ್ರಾಂಸಿಸ್ ರೋಡಿಗ್ರಿಸ್ ವಿದ್ಯುತ್ ಸಂಪರ್ಕ ನೀಡಲು ಕೂಲಿ ಕೆಲಸ ಮಾಡುವ ಗಣೇಶ ನಾಯ್ಕರನ್ನು ಟೀಸಿ ಬಳಿ ಕರೆದುಕೊಂಡು ಹೋದರು.
ಟಿಸಿಯಿಂದ 500 ಮೀ ದೂರದಲ್ಲಿರುವ ಕಂಬ ಏರುವಂತೆ ಲೈನ್ಮೇನ್ ಪ್ರಾಂಸಿಸ್ ರೋಡಿಗ್ರಿಸ್ ತಿಳಿಸಿದ್ದು, ಇದಕ್ಕಾಗಿ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಅವರಿಂದಲೂ ಹೇಳಿಸಿದ್ದರು. ಆದರೆ, ಕಂಬ ಏರುವ ಗಣೇಶ ನಾಯ್ಕರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ಕಂಬ ಹತ್ತಿ ಎಂಗಲಪಟ್ಟಿ ಮೇಲೆ ನಿಂತು ವಿದ್ಯುತ್ ಸಂಪರ್ಕ ಕೊಡುವ ವೇಳೆ ಗಣೇಶ ನಾಯ್ಕ ಅವರಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಅವರು ನೆಲಕ್ಕೆ ಬಿದ್ದರು. ಪರಿಣಾಮ ಅವರ ಸೊಂಟ ಮುರಿದಿದ್ದು, ಇದೀಗ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.