ಕಾರವಾರ: ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಯಾವುದೇ ಸರ್ಕಾರಿ ಸಮಾರಂಭಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆವಹಿಸಿ ಪ್ಲಾಸ್ಟಿಕ್ ಮುಕ್ತ ಸ್ವಾತಂತ್ರö್ಯ ದಿನಾಚರಣೆ ಆಚರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ ದಿನಾಚರಣೆ ಆಯೋಜನೆಯ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ಬ್ಯಾನರ್, ಪ್ಲಾಸ್ಟಿಕ್ ಧ್ವಜ ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ನಿಂದ ತಯಾರಿಸಿದ ಯಾವುದೇ ರೀತಿಯ ವಸ್ತುಗಳನ್ನು ಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಪರಿಸರ ಸ್ನೇಹಿಯಾಗಿ, ಅರ್ಥಪೂರ್ಣವಾಗಿ ದಿನಾಚರಣೆಯನ್ನು ಆಚರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ, ಅರಣ್ಯ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿoದ ಆಕರ್ಷಕ ಪಥ ಸಂಚಲನ ಏರ್ಪಡಿಸುವಂತೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಆಗಸ್ಟ್ 14ರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು, ಎಲ್ಲಾ ಇಲಾಖೆಗಳ ವ್ಯಾಪ್ತಿಯಲ್ಲಿ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಜರಾಗುವವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.