ಕುಮಟಾ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅಲ್ಲಿನ ನ್ಯೂನ್ಯತೆ ಸರಿಪಡಿಸುವ ಬಗ್ಗೆ ಶುಕ್ರವಾರ ಮಧ್ಯಾಹ್ನ ದಿವಿಗಿ ಗ್ರಾ ಪಂ ತುರ್ತು ಸಭೆ ನಡೆಸಿದ್ದು, ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಅಮರ್ ಆಗಮಿಸಿ ನಾಲ್ಕು ಪ್ರಮುಖ ಕೆಲಸ ಮಾಡಿಕೊಡುವ ಆಶ್ವಾಸನೆ ನೀಡಿದರು.
ಸಭೆ ಶುರುವಿನಲ್ಲಿ ಮಾತನಾಡಿದ ಗ್ರಾ ಪಂ ಅಧ್ಯಕ್ಷ ಜಗದೀಶ ಸುರೇಶ ಭಟ್ಟ `ಸಮಸ್ಯೆಗಳ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಕ್ರಮವಾಗಿಲ್ಲ. ಅದರಲ್ಲಿಯೂ ಮುಖ್ಯವಾಗಿ ಸರ್ವಿಸ್ ರಸ್ತೆ ಅಪೂರ್ಣವಾಗಿದ್ದರಿಂದ ಜನ ತೊಂದರೆಗೆ ಸಿಲುಕಿದ್ದಾರೆ\’ ಎಂದು ಅಸಮಧಾನ ವ್ಯಕ್ತಪಡಿಸಿದರು. ನೆರೆದಿದ್ದ ಜನರನ್ನು ಸಮಾಧಾನಪಡಿಸಿದ ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಅಮರ್ ಜನರ ಬೇಡಿಕೆಯಂತೆ `ಮಾನೀರ ದೇವಸ್ಥಾನದಿಂದ ದುಂಡಕುಳಿವರೆಗೆ ಬೀದಿ ದೀಪ ಅಳವಡಿಸುವುದು ತಮ್ಮ ಜವಾಬ್ದಾರಿ\’ ಎಂದರು. ಇದರೊಂದಿಗೆ ದಿವಗಿಯಿಂದ ಶಿರಸಿ ಸಂಪರ್ಕ ರಸ್ತೆ ಸರ್ಕಲ್ನಲ್ಲಿ ದೊಡ್ಡ ಬೆಳಕಿನ ದೀಪ ಅಳವಡಿಸುವುದಾಗಿ ತಿಳಿಸಿದರು. ದಿವಗಿ ತಿರುವಿನಲ್ಲಿ ಪುಟ್ಟ ಸೇತುವೆ ಮಾಡುವ ಭರವಸೆಯನ್ನು ನೀಡಿದರು. ಹರಕಡೆ ದಿವಿಗಿ ಬಸ್ ನಿಲ್ದಾಣ ಅಗತ್ಯವಿರುವ ಬಗ್ಗೆ ಜನ ತಿಳಿಸಿದ್ದು, ಅದನ್ನೂ ಮಾಡುವ ಬಗ್ಗೆ ನಿರ್ಣಯಿಸಿದರು.
ದಿವಗಿ ಹಾಗೂ ಮಣಕಿ ಗ್ರಾಮದಲ್ಲಿ ಸರಿಯಾದ ಸರ್ವಿಸ್ ರಸ್ತೆ ಇಲ್ಲದಿರುವ ಬಗ್ಗೆ ಚರ್ಚೆ ನಡೆಯಿತು. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬoದಿಸಿ ಗೋವಾ ಕರ್ನಾಟಕ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಅರಣ್ಯ ಪ್ರದೇಶ ಮಂಜೂರಿ ಪ್ರಮಾಣ ಪತ್ರ ಅಗತ್ಯವಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಇದ್ದರು.