ಕುಮಟಾ: `ತಂಡ್ರಕುಳಿ ಗ್ರಾಮಸ್ಥರು ಪರ್ಯಾಯ ಜಾಗದ ವಾಸ್ತವ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಶೀಘ್ರದಲ್ಲಿಯೇ ಈಡೇರಿಸಬೇಕು\’ ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಚಿವ ಮಂಕಾಳು ವೈದ್ಯರಿಗೆ ಅವರು ಮನವಿ ಸಲ್ಲಿಸಿದರು. `2017ರಲ್ಲಿ ತಂಡ್ರಕುಳಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ಸಲುವಾಗಿ ಬಂಡೆಗಳನ್ನು ಒಡೆಯಲಾಗಿದೆ. ಈ ವೇಳೆ ಸ್ಪೋಟಕಗಳನ್ನು ಬಳಸಿದ್ದರಿಂದ ಮನೆಗಳಿಗೆ ಹಾನಿಯಾಗಿದೆ. ಈಗಲೂ ಅದೇ ಮನೆಯಲ್ಲಿ ಜನ ಅಪಾಯಕಾರಿ ರೀತಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಪರ್ಯಾಯ ಜಾಗ ಕಲ್ಪಿಸುವ ಬೇಡಿಕೆಯಿತ್ತು. ಆ ಪ್ರಸ್ತಾವನೆಗೆ ಸರ್ಕಾರ ಒಪ್ಪಿ, ಇದೀಗ ಉಪವಿಭಾಗಾಧಿಕಾರಿ ಕಚೇರಿ ತಲುಪಿದೆ. ಬೇರೆ ಕಡೆ ಕಂದಾಯ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಜನರಿಗೆ ಮಂಜೂರಿ ಮಾಡಿಕೊಡುವ ಕೆಲಸ ಬಾಕಿಯಿದೆ. ಶೀಘ್ರದಲ್ಲಿ ಜಾಗ ಮಂಜೂರಿ ಮಾಡಿಕೊಡಬೇಕು\’ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಚಿವ ಮಂಕಾಳು ವೈದ್ಯ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದರು. ತಂಡ್ರಕುಳಿ ಅಂಬಿಗ ಸಮಾಜದ ಅಧ್ಯಕ್ಷ ಗಣಪಯ್ಯ ನಾಗು ಅಂಬಿಗ, ಪದಾಧಿಕಾರಿಗಳಾದ ರಾಮ ಎಚ್ ಅಂಬಿಗ, ರಾಘವೇಂದ್ರ ಎ ಅಂಬಿಗ, ರಮೇಶ ಆರ್ ಅಂಬಿಗ, ಗಣಪತಿ ಎಸ್ ಅಂಬಿಗ ಇದ್ದರು.