ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ ರೇವತಿ ವೆಂಕ ನಾಯ್ಕ ಅವರಿಂದ 5 ಲಕ್ಷ ರೂ ಹಣ ಪಡೆದು ವಂಚಿಸಿದ ಬಗ್ಗೆ ಮಧ್ಯವರ್ತಿ ಗೋಪಾಲಕೃಷ್ಣ ಭಟ್ಟ ಎಂಬಾತರ ವಿರುದ್ಧ ಸಂತ್ರಸ್ತರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹಾಸಣಗಿಯ ರೇವತಿ ನಾಯ್ಕ ಅವರು ಶಿಕ್ಷಕರಾಗಿದ್ದು, ಅವರಿಗೆ ಸುರೇಶ ಕೋಡಿಗದ್ದೆ ಎಂಬಾತರ ಮೂಲಕ ತಾರಿಮಕ್ಕಿಯ ಗೋಪಾಲಕೃಷ್ಣ ಭಟ್ಟ ಎಂಬಾತರ ಪರಿಚಯವಾಗಿತ್ತು. ಗೋಪಾಲಕೃಷ್ಣಗಲ್ಲಿಯಲ್ಲಿರುವ ಭೂಮಿಯನ್ನು ಕೊಡಿಸುವುದಾಗಿ ಭೂ ಮಾಲಕರಿಂದ ಒಪ್ಪಂದ ಮಾಡಿಸಿದ್ದ ಗೋಪಾಲಕೃಷ್ಣ ಭಟ್ಟ ಅವರು 1 ಲಕ್ಷ ರೂ ನಗದನ್ನು ಭೂ ಮಾಲಕರಿಗೆ ಒಪ್ಪಂದದ ವೇಳೆ ಕೊಡಸಿದ್ದರು. ಉಳಿದ 4 ಲಕ್ಷ ಮುಂಗಡ ಹಣಕ್ಕಾಗಿ ರೇವತಿ ಅವರು ಬ್ಯಾಂಕಿನಲ್ಲಿ ತಮ್ಮ ಒಡವೆ ಅಡವಿಟ್ಟು ಅಲ್ಲಿಂದಲೇ ಅವರ ಖಾತೆಗೆ ಹಣ ವರ್ಗಾಯಿಸಿದ್ದರು. ಆದರೆ, ಒಪ್ಪಂದದ ಅವಧಿಯ ಒಳಗೆ ಭೂಮಿಯನ್ನು ಕ್ರಯ ಮಾಡಿಸಿಕೊಡಲು ಮಧ್ಯವರ್ತಿಗಳಿಂದ ಸಾಧ್ಯವಾಗಿರಲಿಲ್ಲ.
ಹೀಗಾಗಿ ತಮ್ಮ ಹಣ ಹಿಂತಿರುಗಿಸಿ ಎಂದು ರೇವತಿ ನಾಯ್ಕ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಗೋಪಾಲಕೃಷ್ಣ ಭಟ್ಟ 3.70 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಈ ಚೆಕ್ ಬ್ಯಾಂಕಿನಲ್ಲಿ ಅಮಾನ್ಯಗೊಂಡಿದ್ದರಿAದ ಅನ್ಯಾಯಕ್ಕೆ ಒಳಗಾದ ರೇವತಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.