ಯಲ್ಲಾಪುರ: ಕಳಚೆ ಭೂ ಕುಸಿತ ವಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಪಾಯದಲ್ಲಿರುವ 23 ಮನೆಗಳಿಗೆ ಸ್ಥಳಾಂತರವಾಗುವoತೆ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೂ ಎಲ್ಲಿಯೂ ಪುನರ್ವಸತಿ ಕಲ್ಪಿಸಿಲ್ಲ!
2021ರಲ್ಲಿ ಕಳಚೆಯಲ್ಲಿ ಭೂ ಕುಸಿತ ಉಂಟಾದಾಗ ಮಹಿಳೆಯೊಬ್ಬರು ಸಾವನಪ್ಪಿದ್ದರು. ಅಪಾರ ಆಸ್ತಿ ಹಾನಿಯಾಗಿತ್ತು. ಆ ವೇಳೆ ಊರಿನ ಅನೇಕರು ಶಾಶ್ವತ ಪುನರ್ವಸತಿಗೆ ಆಗ್ರಹಿಸಿದ್ದರು. ಇದಕ್ಕಾಗಿ ಕೆಲವರು ಹೋರಾಟವನ್ನು ನಡೆಸಿದ್ದರು. ಆದರೆ, ಶಾಸಕರು `ಕಿವಿ ಊದುವವರ\’ ಮಾತಿಗೆ ಮರುಳಾಗಿ ಇದನ್ನು ತಡೆ ಹಿಡಿದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲ `ತಾಂತ್ರಿಕ ಕಾರಣ\’ ಎಂಬ ನೆಪ ಹೇಳುತ್ತಿದ್ದು, ಆ ಕಾರಣವನ್ನು ಸರಿಪಡಿಸುವ ಕೆಲಸ ಮಾಡಲಿಲ್ಲ. ಇದೀಗ ಮತ್ತೆ ಕಳಚೆಯಲ್ಲಿ ಭೂ ಕುಸಿತವಾಗಿದ್ದು, ಅಲ್ಲಿನವರು ಪುನರ್ವಸತಿ ಕಲ್ಪಿಸಿ ಎಂದು ಅಂಗಲಾಚುತ್ತಿದ್ದಾರೆ. ಆದರೆ, ಅವರ ಕೂಗು ಕೇಳಬೇಕಾದವರಿಗೆ ಕೇಳುತ್ತಿಲ್ಲ.
ಭೂ ಕುಸಿತದ ಸುದ್ದಿ ಕೇಳಿ ಸೋಮವಾರ ಸಹ ಅಧಿಕಾರಿಗಳು ಕಳಚೆಗೆ ಭೇಟಿ ನೀಡಿ ತೋಟಗಳನ್ನು ಪರಿಶೀಲಿಸಿದರು. ಅಪಾಯದಲ್ಲಿರುವ ಮನೆಗಳಿಗೆ ಮತ್ತೊಮ್ಮೆ ನೋಟಿಸ್ ನೀಡಿದರು. ಹಾಳಾದ ತೋಟಗಳನ್ನು ಪರಿಶೀಲಿಸಿ, 1 ಹೆಕ್ಟೇರ್ ಅಡಿಕೆ ತೋಟ ಹಾಳಾದರೆ 22 ಸಾವಿರ ಪರಿಹಾರ ಬರುವ ಬಗ್ಗೆ ತಿಳಿಸಿದರು. ಇಲ್ಲಿ 1 ಎಕರೆಯಷ್ಟು ತೋಟ ಹಾಳಾಗಿದ್ದು, ಅದಕ್ಕೆ ಬರುವ ಪರಿಹಾರ ಹಾಗೂ ಅದಕ್ಕಾಗಿ ಅರ್ಜಿ ಹಿಡಿದು ಓಡಾಡುವ ಖರ್ಚಿನ ಲೆಕ್ಕಾಚಾರದ ಬಗ್ಗೆ ಜನ ಅಳೆದು ತೂಗಿದರು.