
ಶಿರಸಿ: ವಿಶಾಲನಗರದ ಉದ್ಯಾನ ಎದುರು ಗೂಡಂಗಡಿ ನಡೆಸುತ್ತಿದ್ದ ಕಿರಣ ಶಂಕರಪ್ಪ ಬರಡೂರು (50) ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರ ಬಳಿ ಆತ ಮಟ್ಕಾ ದಂದೆಯ ರೂವಾರಿಯ ಹೆಸರು ಬಾಯ್ಬಿಟ್ಟಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮರಾಠಿಕೊಪ್ಪ ಭಾರತಮಾತಾ ಸರ್ಕಲ್ ಬಳಿ ಕಿರಣ್ ಗೂಡಂಗಡಿಯಲ್ಲಿ ಪಾನ್ ಮಸಾಲ ಮಾರುತ್ತಿದ್ದ. ಜೊತೆಗೆ ಮಟ್ಕಾ ಹಣವನ್ನು ಆತ ಸಂಗ್ರಹಿಸಿ ಕಮೀಷನ್ ಪಡೆಯುತ್ತಿದ್ದ. ಇದನ್ನು ಅರಿತ ಪಿಸೈ ರತ್ನಾ ಕುರಿ ಅಗಸ್ಟ 6ರಂದು ಅಂಗಡಿ ಮೇಲೆ ದಾಳಿ ನಡೆಸಿದರು.
ದಾಳಿಯ ವೇಳೆ ಆತ ಮಟ್ಕಾ ಸಂಖ್ಯೆಯನ್ನು ಬರೆಯಲು ಬಳಸುತ್ತಿದ್ದ ಬಾಲ್ಪೆನ್, ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ 1140ರೂ ಹಣ ಸಿಕ್ಕಿತ್ತು. `ಈ ಹಣ ಯಾರಿಗೆ ಕೊಡುವೆ?\’ ಎಂದು ಪ್ರಶ್ನಿಸಿದಾಗ ಆತ ಮಟ್ಕಾಬುಕ್ಕಿಯ ಹೆಸರು ಹೇಳಿದ್ದ. ಶಿರಸಿ ವಿವೇಕಾನಂದ ನಗರದ ರಾಹುಲ್ ಶಿವಕುಮಾರ ದೇವಗಿ ಎಂಬಾತ ತನ್ನಿಂದ ಈ ಮಟ್ಕಾ ಹಣ ಪಡೆಯುವ ಬಗ್ಗೆ ಆತ ಬಾಯ್ಬಿಟ್ಟಿದ್ದ.
ಈ ಹಿನ್ನಲೆ ಪೊಲೀಸರು ಕಿರಣ ಶಂಕರಪ್ಪ ಬರಡೂರು ಎಂಬಾತನ ಜೊತೆ ಮಟ್ಕಾ ಬುಕ್ಕಿ ರಾಹುಲ್ ಶಿವಕುಮಾರ ದೇವಗಿ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.