ಕಾಳಿ ಸೇತುವೆ ಕುಸಿತವಾದಾಗ 5ಕ್ಕೂ ಅಧಿಕ ಲಾರಿ ಹಾಗೂ ಕುಮಟಾದ ಕುಟುಂಬವಿದ್ದ ಒಂದು ಕಾರು ಸೇತುವೆ ಬಳಿ ಸಂಚರಿಸುತ್ತಿತ್ತು. ತಕ್ಷಣ ಚಿತ್ತಾಕುಲ ಪೊಲೀಸ್ ಸಿಬ್ಬಂದಿ ವಿನಯ ಕಾಣಕೋಣಕರ್ ತಮ್ಮ ಸ್ಕೂಟಿಯನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಆ ವಾಹನದಲ್ಲಿದ್ದವರ ಜೀವ ಕಾಪಾಡಿದರು!
ಬುಧವಾರ ಬೆಳಗ್ಗೆ 12.30ರ ಆಸುಪಾಸಿನಲ್ಲಿ ವಿನಯ್ ಅವರಿಗೆ ಮೀನುಗಾರರೊಬ್ಬರು ಫೋನ್ ಮಾಡಿದ್ದರು. `ಸೇತುವೆ ಬಳಿ ದೊಡ್ಡ ಸದ್ದಾಗಿದೆ\’ ಎಂದವರು ಹೇಳಿದ್ದರು. ಮನೆ ಎದುರಿಗಿದ್ದ ಸ್ಕೂಟಿ ಮಳೆಯಲ್ಲಿ ನೆನೆಯದಂತೆ ತಾಡಪತ್ರೆ ಹೊದಿಸಲು ಹೋಗಿದ್ದ ವಿನಯ್ ಅದೇ ಸ್ಕೂಟಿ ಏರಿ ನಿಮಿಷದ ಒಳಗೆ ಸೇತುವೆ ಬಳಿ ನಿಂತಿದ್ದರು. ನದಿಯೊಳಗಿದ್ದ ಲಾರಿಯ ಲೈಟ್ ಅವರ ಕಣ್ಣಿಗೆ ಕುಗ್ಗಿದ್ದರಿಂದ ಮೊದಲು ಸೇತುವೆ ಮುರಿದಿದ್ದು ಗೊತ್ತಾಗಿರಲಿಲ್ಲ. ಹತ್ತಿರ ಹೋಗಿ ನೋಡಿದ ನಂತರ ಅಪಾಯ ಅರಿತ ಅವರು ಮೊದಲು ಸ್ಕೂಟಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಆ ಮಾರ್ಗದಲ್ಲಿ ಬರುತ್ತಿದ್ದ ಎಲ್ಲಾ ವಾಹನವನ್ನು ತಡೆದರು.
ತಕ್ಷಣ ಅಲ್ಲಿದ್ದ ಲಾರಿ ಚಾಲಕನಿಗೆ ಮನವಿ ಮಾಡಿ ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿ ಎಲ್ಲಾ ವಾಹನಗಳನ್ನು ಸದಾಶಿವಗಡದ ಕಡೆಗೆ ಕಳುಹಿಸಿದರು. ಅದಾದ ಮೇಲೆ ಪೊಲೀಸ್ ಠಾಣೆ, ಆಂಬುಲೆನ್ಸ್ ಕಂಟ್ರೋಲ್ ರೂಂ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗೆ ಫೋನ್ ಮಾಡಿದ್ದರು. ಅಚ್ಚರಿಯಾದರೂ ಇದೆಲ್ಲವೂ ನಡೆದಿದ್ದು 5ರಿಂದ 10 ನಿಮಿಷದ ಒಳಗೆ!
ಕಾಳಿ ಸೇತುವೆಯಿಂದ 300 ಮೀ ದೂರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಪೊಲೀಸ್ ಸಿಬ್ಬಂದಿ ವಿನಯ ಕಾಣಕೋಣಕರ್\’ಗೆ ಬುಧವಾರ ಬೆಳಗ್ಗೆ 12.30ರ ಆಸುಪಾಸಿನಲ್ಲಿ ಮೀನುಗಾರರೊಬ್ಬರು ಫೋನ್ ಮಾಡಿದ್ದರು. ಚಡ್ಡಿ-ಬನಿಯೆನ್ ಧರಿಸಿದ್ದ ವಿನಯ್ ಅದೇ ಉಡುಪಿನಲ್ಲಿ ಸೇತುವೆ ಬಳಿ ಹಾಜರಾಗಿದ್ದರು. ನೀರಿನಾಳದಲ್ಲಿ ಬಿದ್ದಿದ್ದ ಲಾರಿಯ ಲೈಟ್ ಅವರ ಕಣ್ಣು ಕುಕ್ಕಿತ್ತು. ಅದಾದ ನಂತರವೇ ಸೇತುವೆ ಕುಸಿದ ಬಗ್ಗೆ ಅವರಿಗೆ ಅರಿವಾಗಿದ್ದು. ಅವರು ಅಲ್ಲಿಗೆ ಬರುವ ವೇಳೆಗಾಗಲೇ ಲಾರಿ ನೀರಿನಲ್ಲಿದ್ದು, ಲಾರಿ ಚಾಲಕ ಅದರೊಳಗೆ ಸಿಕ್ಕಿಬಿದ್ದಿದ್ದ. ಆತನ ಭಾಷೆ ಅರ್ಥವಾಗುತ್ತಿರಲಿಲ್ಲ. ಆ ವೇಳೆಗಾಗಲೇ ಪಿಸೈ ಮಾಹಂತೇಶ ವಾಲ್ಮಿಕಿ ಹಾಗೂ ಚಿತ್ತಾಕುಲ ಠಾಣೆಯ ವಾಸುದೇವ ಕೊನೇರಿ, ರಾಜೇಶ್ ನಾಯ್ಕ ಸ್ಥಳಕ್ಕೆ ಆಗಮಿಸಿದ್ದರು. ಲಾರಿ ಚಾಲಕ ಕಿರುಚುವ ಪರಿಸ್ಥಿತಿಯಲ್ಲಿ ಸಹ ಇರಲಿಲ್ಲ. ಪೊಲೀಸರು ಸ್ಥಳೀಯರ ನೆರವು ಪಡೆದು ಲಾರಿ ಚಾಲಕನನ್ನು ರಕ್ಷಿಸಿದರು. ವಿನಯ ಕಾಣಕೋಣಕರ್\’ಗೆ ಬಂದ ಮೀನುಗಾರನ ಫೋನ್ ಕರೆ ಹಾಗೂ ಆ ವೇಳೆ ವಿನಯ ಕಾಣಕೋಣಕರ್\’ರ ಸಮಯ ಪ್ರಜ್ಞೆ ನೂರಾರು ಜೀವ ಉಳಿಸಿತು. ಅದಕ್ಕಿಂತ ಮಿಗಿಲಾಗಿ ನದಿ ಪಾಲಾಗಿದ್ದ ಲಾರಿಯ ಪೋಕಸ್ ಲೈಟ್ ಸ್ವಲ್ಪ ಹೆಚ್ಚಾಗಿದ್ದರೂ ವಿನಯ ಸಹ ಸಮುದ್ರ ಪಾಲಾಗುತ್ತಿದ್ದರು!
`ನಾ ಬರುವುದು ಕೊಂಚ ತಡವಾಗಿದ್ದರೂ ಕಾರಿನಲ್ಲಿದ್ದ ಕುಟುಂಬದ ಎಲ್ಲರೂ ನೀರು ಪಾಲಾಗುತ್ತಿದ್ದರು. ಜೀವ ಉಳಿಸಿದಕ್ಕಾಗಿ ಅವರು ಕಾಲಿಗೆ ನಮಸ್ಕರಿಸಲು ಬಂದರು. ಈ ವೇಳೆ ಪೊಲೀಸ್ ಸೇವೆಗೆ ಸೇರಿದ್ದು ಸಾರ್ಥಕ ಎನಿಸಿತು\’ ಎಂದು ವಿನಯ ಕಾಣಕೋಣಕರ್ ಭಾವುಕರಾದರು.