ಹೊನ್ನಾವರ: `2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಅನ್ವಯಿಸುವುದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯ ಸರಿಪಡಿಸುವುದರ ಜೊತೆ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು\’ ಎಂದು ಆಗ್ರಹಿಸಿ ಶಿಕ್ಷಕ ಸಮೂಹದವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಅವರು ಒತ್ತಾಯಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ. ಕಾರ್ಯದರ್ಶಿಗಳಾದ ಕೆ.ಎಂ ಹೆಗಡೆ, ಜಿಲ್ಲಾ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ ಇತರರು ಇದ್ದರು.