ಯಲ್ಲಾಪುರ: ಬಿಸಗೋಡು ಸರ್ಕಾರಿ ಪ್ರೌಢಶಾಲೆ ಮಳೆಗೆ ಸೋರುತ್ತಿದೆ. ಹೀಗಾಗಿ ಊರಿನವರೇ ಸೇರಿ ತಾಡಪಲ್ ಹೊದಕೆ ಹೊದಿಸಿದ್ದಾರೆ. ಗಾಳಿ ಜೋರಾದಾಗ ಆ ತಾಡಪತ್ರೆ ಹಾರಿ ಹೋಗುತ್ತಿದ್ದು, ಅದನ್ನು ತಂದು ಮತ್ತೆ ಹೊದಸುವುದೇ ಅಲ್ಲಿನವರಿಗೆ ಸಾಹಸದ ಕೆಲಸ!
ಕಳೆದ ಮೂರು ವರ್ಷಗಳಿಂದ ಈ ಶಾಲೆ ಸೋರುತ್ತಿದೆ. ಆದರೆ, ಈವರೆಗೂ ಸೋರುವುದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. `ಬೇಸಿಗೆ ಅವಧಿಯಲ್ಲಿ ಬೇರೆ ಹಂಚು ಅಳವಡಿಸಿದರೆ ಮಳೆಗಾಲದ ಸಮಸ್ಯೆ ತಡೆಯಬಹುದು\’ ಎಂಬುದು ಅನೇಕರ ಅಭಿಪ್ರಾಯ. ಆದರೆ, ಬೇಸಿಗೆ ಬಂದಾಗ ಮಳೆಗಾಲದ ಸಮಸ್ಯೆಯೇ ನೆನಪಾಗುತ್ತಿಲ್ಲ. ಹೀಗಾಗಿ ಮುಂದಿನ ಮಳೆಗಾಲದಲ್ಲಿ ಮಕ್ಕಳು ನಡುಗುವುದು ಅನಿವಾರ್ಯ ಎಂಬoತಾಗಿದೆ.
ಈ ವರ್ಷ ಜಿಲ್ಲಾ ಪಂಚಾಯತದವರು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಮುಂದಿನ ವರ್ಷವಾದರೂ ಶಾಲೆ ಮೇಲೆ ಏರಿ ತಾಡಪತ್ರೆ ಹೊದೆಸುವ ಸವಾಲಿನ ಕೆಲಸಕ್ಕೆ ಮುಕ್ತಿ ದೊರೆಯಬಹುದು ಎಂಬ ಆಶಾ ಭಾವನೆ ವ್ಯಕ್ತವಾಗಿದೆ.