ಶಿರಸಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕೋಣ ರಸ್ತೆಯಲ್ಲಿ ಹಾದು ಹೋಗುವವರ ಮೇಲೆಲ್ಲ ದಾಳಿ ನಡೆಸುತ್ತಿದ್ದು, ಆ ಕೋಣವನ್ನು ಸಾರ್ವಜನಿಕರು ಇದೀಗ ಸೆರೆ ಹಿಡಿದಿದ್ದಾರೆ.
ಬುಧವಾರ ಸಂಜೆ ಈ ಕೋಣ ವಿವೇಕ್ ಮಡಿವಾಳ ಎಂಬಾತರ ಮೇಲೆ ದಾಳಿ ನಡೆಸಿತ್ತು. ಗಾಯಗೊಂಡ ಅವರು ಆಸ್ಪತ್ರೆ ಸೇರಿದ್ದರು. ಪ್ರಸ್ತುತ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅದಾದ ನಂತರ ಇನ್ನೂ ಕೆಲವರ ಮೇಲೆ ಕೋಣ ದಾಳಿ ನಡೆಸುವ ಪ್ರಯತ್ನ ನಡೆಸಿತ್ತು. ಅಪಾಯಕಾರಿ ಕೋಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಅರಿತ ಕೆಲ ಗೋ ರಕ್ಷಕರು ಉಪಾಯವಾಗಿ ಕೋಣವನ್ನು ಸೆರೆ ಹಿಡಿದಿದ್ದಾರೆ. ಅಕ್ರಮ ಜಾನುವಾರು ಸಾಗಾಟದ ವೇಳೆ ಸಿಕ್ಕಿಬಿದ್ದ ಕೋಣ ಇದಾಗಿದ್ದು, ನಂತರ ತಪ್ಪಿಸಿಕೊಂಡ ಬಗ್ಗೆ ಮಾತುಗಳಿವೆ. ಆದರೆ, ಇದು ಖಚಿತವಾಗಿಲ್ಲ.