ಕಾಳಿ ಸೇತುವೆ ಕುಸಿತವಾದರೂ ಕರಾವಳಿ ಕಾವಲು ಪಡೆಯ ಯಾಂತ್ರಿಕೃತ ಬೋಟ್ ಇದ್ದ ಸ್ಥಳದಿಂದ ಅಲುಗಾಡಲಿಲ್ಲ. ಬೋಟಿಗೆ ಹೊದಸಿದ್ದ ತಾಡಪತ್ರೆಯನ್ನು ಸಹ ತೆಗೆಯಲಿಲ್ಲ. ಹೀಗಾಗಿ ಕಾಳಿ ಸೇತುವೆ ಕುಸಿತದ ಸಮಯದಲ್ಲಿ ಸ್ಥಳೀಯ ಮೀನುಗಾರರ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಕಡಲಿನ ಗಸ್ತು ಹಾಗೂ ತುರ್ತು ಸನ್ನಿವೇಶಗಳ ಉಪಯೋಗಕ್ಕಾಗಿ ಸರ್ಕಾರ ಲಕ್ಷಾಂತರ ರೂ ಮೌಲ್ಯದ ಬೋಟನ್ನು ಕರಾವಳಿ ಕಾವಲು ಪಡೆಯವರಿಗೆ ನೀಡಿದೆ. ಕಡಲ ಅಕ್ರಮ ತಡೆ ಹಾಗೂ ತುರ್ತು ಕಾರ್ಯಾಚರಣೆಗೆ ಈ ಬೋಟ್ ಬಳಕೆಯಾಗಬೇಕಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬೋಟ್ ಕಡಲಿಗೆ ಇಳಿದಿದನ್ನು ನೋಡಿದವರಿಲ್ಲ. ಕಾರವಾರದಲ್ಲಿ ಇಂಥ ಎರಡು ಬೋಟುಗಳಿದ್ದು, ಒಂದು ದುರಸ್ತಿಯಲ್ಲಿದೆ. ಇನ್ನೊಂದು ಹಾಗೇ ನಿಂತಿದೆ!
ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆ ಪ್ರದೇಶದಲ್ಲಿನ ಶೆಡ್ಡಿನಲ್ಲಿ ದುರಸ್ತಿ ಬೋಟ್ ನಿಲ್ಲಿಸಲಾಗಿದ್ದು, ಇನ್ನೊಂದು ಬೋಟಿನ ನಿರ್ವಹಣೆ ಕೆಲಸ ಇನ್ನೂ ಮುಗಿದಿಲ್ಲ. ಪ್ರತಿ ವರ್ಷ ಅಗಸ್ಟ್ ಮೊದಲ ವಾರದಲ್ಲಿ ಈ ಬೋಟುಗಳು ನೀರಿಗೆ ಇಳಿಯುತ್ತಿದ್ದವು. ಸಮುದ್ರದಲ್ಲಿನ ಗಸ್ತು ಚಟುವಟಿಕೆಯಲ್ಲಿ ಎರಡೂ ಬೋಟುಗಳು ತೊಡಗಿಕೊಳ್ಳುತ್ತಿದ್ದವು. ಆದರೆ, ಈ ಸಲ ಕಾಳಿ ಸೇತುವೆ ದುರಂತ ನಡೆದರೂ ಬೋಟು ಅಲುಗಾಡಿಲ್ಲ.
`ಈ ಬೋಟಿನ ನಿರ್ವಹಣೆಯನ್ನು ಕೇರಳದ ಕಂಪನಿ ವಹಿಸಿಕೊಂಡಿದ್ದು, ಅವರು ನಿಧಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತುರ್ತು ಸನ್ನಿವೇಶದಲ್ಲಿ ಸಹ ಗಸ್ತು ವಾಹನ ಸಿಗುತ್ತಿಲ್ಲ\’ ಎಂಬುದು ಅಧೀಕಾರಿಗಳ ಅಳಲು. `ಈ ಬೋಟನ್ನು ನಿರ್ವಹಣೆ ನೆಪದಲ್ಲಿ ದಡದಲ್ಲಿಡುವ ದಿನಗಳೇ ಹೆಚ್ಚು. ಇದರಿಂದ ಯಾರಿಗೂ ಉಪಯೋಗವಾಗಿಲ್ಲ\’ ಎಂಬುದು ಮೀನುಗಾರರ ದೂರು.