ಅಡಿಕೆ ವ್ಯಾಪಾರದಲ್ಲಿ ಅವ್ಯವಹಾರ ಹಾಗೂ ಮೋಸ ನಡೆದಿರುವ ಬಗ್ಗೆ ಟಿ ಎಸ್ ಎಸ್ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಎಲ್ಲಾ ಅವಾಂತರಗಳಿಗೆ ಮುಖ್ಯ ಕಾರಣವಾಗಿದ್ದವರ ಹೆಸರು ದೂರಿನಲ್ಲಿಯೇ ಇಲ್ಲ!
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ನಿರ್ದೇಶಕರಾದ ಹಳವಳ್ಳಿಯ ಸಂತೋಷ ವಿ ಭಟ್ಟ, ಜೂಜನಬೈಲಿನ ಕೃಷ್ಣ ಗಣಪತಿ ಹೆಗಡೆ, ಶಿರಸಿಯ ಗಿರಿಶ್ ಚಿದಾನಂದ ಹೆಗಡೆ, ಚಿಪಗಿಯ ರವಿ ಲಕ್ಷ್ಮೀನಾರಾಯಣ ಹೆಗಡೆ ವಿರುದ್ಧ ಶಿರಸಿ ಬಿಳೂರು ಮಂಜುನಾಥ ಲಕ್ಷ್ಮಣ ನಾಯ್ಕ ಎಂಬಾತರು ದೂರು ದಾಖಲಿಸಿದ್ದಾರೆ. `ಜುಲೈ 22ರಂದು ತಾವು ಮಾರಾಟಕ್ಕೆ ತಂದ ಅಡಿಕೆಯನ್ನು ಗರಿಷ್ಟ ಬೆಲೆಗೆ ಮಾರದೇ, ದಾಖಲೆ ತಿದ್ದುಪಡಿ ಮಾಡಿ ಕನಿಷ್ಟ ಬೆಲೆಗೆ ಮಾರಾಟ ಮಾಡಿದ್ದು ಇದರಿಂದ ತಮಗೆ 1.56 ಲಕ್ಷ ರೂ ನಷ್ಟವಾಗಿದೆ\’ ಎಂಬುದು ದೂರಿನ ಸಾರಾಂಶ. ಆದರೆ, ಅಂಕಿ-ಸoಖ್ಯೆಗಳನ್ನು ತಿದ್ದುಪಡಿ ಆದ ದಿನ ಈ ಮೇಲಿನ ಯಾವ ಆರೋಪಿತರು ಆ ಸ್ಥಳದಲ್ಲಿರಲಿಲ್ಲ. ಸ್ಥಳಕ್ಕೆ ಬಂದರೂ ಅವರಿಂದ ಆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ!
ಇನ್ನೂ ತಾಯಿ ಅನಾರೋಗ್ಯದ ಕಾರಣ ಜುಲೈ 22ರಿಂದಲೇ ಎಪಿಎಂಸಿ ಕಾರ್ಯದರ್ಶಿ ಅರವಿಂದ ಪಾಟೀಲ ರಜೆಯಲ್ಲಿದ್ದಾರೆ. ಹೀಗಾಗಿ ತಿದ್ದುಪಡೆ ಮಾಡಿದ್ದು ಅವರೂ ಆಗಿರಲಿಕ್ಕಿಲ್ಲ. ಇನ್ನೂ ವದಂತಿಗಳು ಹಬ್ಬಿರುವ ಪ್ರಕಾರ ದೂರುದಾರ ರೈತರು ಸಹ ತಾವೇ ಅಂಕಿ-ಸoಖ್ಯೆ ತಿದ್ದುಪಡಿ ಮಾಡಿ ದ್ವೇಷದ ಕಾರಣ ದೂರು ನೀಡುವ ಸಾಧ್ಯತೆಗಳಿಲ್ಲ. ಆ ರೈತರಿಗೆ ಸಹ ಈ ಅಂಕಿ-ಸoಖ್ಯೆ ತಿದ್ದುಪಡಿ ಮಾಡಲು ಆಗುವುದಿಲ್ಲ. ಟಿಎಸ್ಎಸ್ ಸಿಬ್ಬಂದಿಗೆ ಸಹ ಟೆಂಡರ್ ತಿದ್ದುಪಡಿ ಮಾಡುವ ಅಧಿಕಾರ ಇಲ್ಲ. ಹಾಗಾದರೆ, ಈ ಎಲ್ಲಾ ಅವಾಂತರಗಳಿಗೆ ಕಾರಣವಾದ ದರ ತಿದ್ದುಪಡಿ ಮಾಡಿದ ವ್ಯಕ್ತಿ ಯಾರು? ಎಂಬುದು ಈವರೆಗೂ ಬಗೆಹರಿಯದ ರಹಸ್ಯ!
ನಿಯಮಗಳ ಪ್ರಕಾರ ಎಲ್ಲಾ ವರ್ತಕರು ಆನ್ಲೈನ್ ಮೂಲಕ ಟೆಂಡರ್ ಬರೆಯಬೇಕು. ಆಗ ಪಾರದರ್ಶಕ ಆಡಳಿತವೂ ಸಾಧ್ಯ ಎಂಬುದು ಸರ್ಕಾರದ ನಿಲುವು. ಆದರೆ, ಪ್ರಸ್ತುತ ಆನ್ಲೈನ್ ಎಂಬುದು ದಾಖಲೆಗೆ ಮಾತ್ರ ಸೀಮಿತವಾಗಿದ್ದು, ಆಫ್ಲೈನ್\’ಗೆ ಒತ್ತು ನೀಡಿರುವುದೇ ಈ ಅವಾಂತರಗಳಿಗೆ ಮುಖ್ಯ ಕಾರಣ. ಅದಾಗಿಯೂ ವರ್ತಕರು ಕಣ್ತಪ್ಪಿನಿಂದ ಅಡಿಕೆ ದರ ಜಾಸ್ತಿ ಬರೆದಿದ್ದರೆ ಸಂಬoಧಿಸಿದ ರೈತರು ಹಾಗೂ ವರ್ತಕರನ್ನು ಕರೆಯಿಸಿ ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ಎಲ್ಲರ ಮನವರಿಕೆ ಮಾಡಲು ಅವಕಾಶವಿದೆ. ಆ ವೇಳೆ ರೈತ ಒಪ್ಪಿದಲ್ಲಿ ಎರಡನೇ ಬಿಡ್ದಾರರಿಗೆ ಅಡಿಕೆ ಮಾರಾಟ ಮಾಡಬಹುದು ಅಥವಾ ಅಡಿಕೆ ಮಾರಾಟವನ್ನು ಆ ದಿನದ ಮಟ್ಟಿಗೆ ರದ್ದುಪಡಿಸಬಹುದು. ಆದರೆ, ಜುಲೈ 22ರಂದು ರೈತರಿಗೆ ಮಾಹಿತಿ ನೀಡದೇ ಗರಿಷ್ಟ ದರ ನಮೂದಿಸಿದವರನ್ನು ಬಿಟ್ಟು ಎರಡನೇ ಗರಿಷ್ಟ ದರಕ್ಕೆ ಟೆಂಡರ್ ಬರೆದವರಿಗೆ ಅಡಿಕೆ ನೀಡಿದ್ದು ರೈತರ ಆಕ್ರೋಶಕ್ಕೆ ಕಾರಣ.
ಇನ್ನೂ ಇಂಥ ಸಮಸ್ಯೆಗಳು ಎದುರಾದಾಗ ಎಪಿಎಂಸಿ ಆವರಣದಲ್ಲಿ ಈವರೆಗೂ `ದೂರು ಪೆಟ್ಟಿಗೆ\’ ಸ್ಥಾಪನೆ ಆಗಿಲ್ಲ. ಎಲ್ಲಿ ಹುಡುಕಿದರೂ `ಸಲಹಾ ಪೆಟ್ಟಿಗೆ\’ ಸಹ ಕಾಣುವುದಿಲ್ಲ. ಕೆಳಹಂತದ ಅಧಿಕಾರಿಗಳ ಬಳಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇದ್ದಾಗ ಮೇಲಾಧಿಕಾರಿಗಳನ್ನು ಸಂಪರ್ಕಿಸುವ ವಿಧಾನದ ಬಗ್ಗೆ ಜಾಗೃತಿಯ ಫಲಕಗಳಿಲ್ಲ. ಹೀಗಾಗಿ ತಳಮಟ್ಟದಲ್ಲಿಯೇ ಬಗೆಹರಿಯಬೇಕಾದ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಎಪಿಎಂಸಿಯವರನ್ನು ಕೇಳಿದರೆ `ಈ ಕೆಲಸ TSS ಸಂಸ್ಥೆಯವರು ಮಾಡಿದ್ದು\’ ಎನ್ನುತ್ತಾರೆ. TSS\’ನವರನ್ನು ಕೇಳಿದರೆ ಈ ಕೆಲಸ ಎಪಿಎಂಸಿ ಸಿಬ್ಬಂದಿ ಮಾಡಿದ್ದು\’ ಎನ್ನುತ್ತಿದ್ದಾರೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬoಧಿಸಿದoತೆ ಎರಡು ಕಡೆಯವರಿಗೆ ನೋಟಿಸ್ ಜಾರಿಯಾಗಿ ಅದರ ವರದಿ ತಹಶೀಲ್ದಾರರ ಕಡತ ಸೇರಿದೆ. ಪೊಲೀಸ್ ವಿಚಾರಣೆಯಲ್ಲಾದರೂ `ರೈತರಿಗೆ ಆಗುತ್ತಿದ್ದ ಅನ್ಯಾಯಕ್ಕೆ ನ್ಯಾಯ ಸಿಗಲಿ. ವರ್ತಕರಿಗೂ ಅನ್ಯಾಯ ಆಗದಿರಲಿ\’ ಎಂಬುದು ಹಲವರ ಅಂಬೋಣ.
ಕುಮ್ಮಕ್ಕು ಕಾರಣ
`ಅನಗತ್ಯವಾಗಿ ನಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಇದಕ್ಕೆ ಬೇರೆಯವರ ಕುಮ್ಮಕ್ಕು ಕಾರಣ\’ ಎಂದು TSS ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದ್ದಾರೆ. `ಅಡಿಕೆ ದರ ತಿದ್ದುಪಡಿ ಮಾಡಿದವರು ಯಾರು ಎಂದು ಗೊತ್ತಿಲ್ಲ. ಆದರೆ, ಇದಕ್ಕೆ TSS ಜವಾಬ್ದಾರಿಯಾದ ಕಾರಣ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ದೂರು ನೀಡಿದ್ದು, ಪೊಲೀಸ್ ವಿಚಾರಣೆ ವೇಳೆ ತಿದ್ದುಪಡಿ ಮಾಡಿದವರ ಹೆಸರು ಹೊರಬರಲಿದೆ. ಆಗ, ಅವರ ವಿರುದ್ಧವೂ ದೂರು ದಾಖಲಿಸುವೆ\’ ಎಂದು ರೈತ ಮಂಜುನಾಥ ನಾಯ್ಕ ಹೇಳಿದರು. ಶಿರಸಿ ಬಿಳೂರಿನ ಈಶ್ವರ ಪಕೀರಪ್ಪ ನಾಯ್ಕ, ಈರಪ್ಪ ನಾಗೇಶ ನಾಯ್ಕ ಹಾಗೂ ಶಿರಸಿ ಉಲ್ಲಾಳಕೊಪ್ಪದ ಶ್ರೀಧರ ಗಣಪತಿ ಭಟ್ಟ ಸಹ ಈ ಪ್ರಕರಣದ ದೂರುದಾರರು.
`ರೈತರು ಯಾವುದೇ ಸಮಸ್ಯೆ ಎದುರಾದಾಗ ಮೊದಲು ಎಪಿಎಂಸಿ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಸಬೇಕು. ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ\’ ಎಂದು ಎಪಿಎಂಸಿ ಕಾರ್ಯದರ್ಶಿ ಅರವಿಂದ ಪಾಟೀಲ್ ತಿಳಿಸಿದರು.
ಒಟ್ಟಿನಲ್ಲಿ `ಅಡಿಕೆ\’ ಹರಾಜಿನ ವಿಷಯದಲ್ಲಿನ ಗೊಂದಲದಿAದ ಎಪಿಎಂಸಿ ಹಾಗೂ ಟಿಎಸ್ಎಸ್ ಮಾನ ಹರಾಜಾಗಿದೆ.