ಕೂಡಿಗೆಯ ಸೀತಾ ಸಿದ್ದಿ ಅವರ ಮನೆ ಗೋಡೆ ಪೂರ್ತಿ ಕುಸಿದಿದ್ದು, ಇನ್ನೆರಡು ಗೋಡೆಗೆ ಭಾರೀ ಪ್ರಮಾಣದ ಬಿರುಕು ಮೂಡಿದೆ. ಆದರೆ, ಸರ್ಕಾರದಿಂದ ಅವರಿಗೆ ಪರಿಹಾರ 4 ಸಾವಿರ ರೂ ಪರಿಹಾರದ ಭರವಸೆ ಮಾತ್ರ ಸಿಕ್ಕಿದ್ದು, ಆ ಹಣ ಸಹ ಜಮಾ ಆಗಿಲ್ಲ!
`ಆವಾಸ್ ಯೋಜನೆ ಅಡಿ ನಿರ್ಮಿಸಿದ ಮನೆಗೆ ಪರಿಹಾರ ಕೊಡಲ್ಲ\’ ಎಂಬುದು ಅಧಿಕಾರಿಗಳ ಅಂಬೋಣ. ಬೇರೆ ಯೋಜನೆಯಲ್ಲಾದರೂ ಒಂದು ಮನೆ ನಿರ್ಮಿಸಿಕೊಡಿ\’ ಎಂಬುದು ಸೀತಾ ಅವರ ಪುತ್ರ ನರಸಿಂಹ ಸಿದ್ದಿ ಅವರ ಬೇಡಿಕೆ.
ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾ ಪಂ ವ್ಯಾಪ್ತಿಯ ಕೂಡಿಗೆ ಸೀತಾ ಸಿದ್ದಿ ಅವರಿಗೆ 2010ರಲ್ಲಿ ಇಂದಿರಾಗಾoಧಿ ವಸತಿ ಯೋಜನೆ ಅಡಿ ಮನೆ ಮಂಜೂರಿಯಾಗಿತ್ತು. ಮೂರು ಹಂತದಲ್ಲಿ 50 ಸಾವಿರ ರೂ ಅವರಿಗೆ ಜಮಾ ಆಗಿದ್ದು, 360 ಅಡಿ ಪ್ರದೇಶದಲ್ಲಿ ಶೀಟಿನ ಮನೆಯನ್ನು ನಿರ್ಮಿಸಿಕೊಂಡಿದ್ದರು.
ಇದೇ ಮನೆಯಲ್ಲಿ 2 ತಿಂಗಳ ಹಸುಗೂಸು ದೀಪಶಿಕ್, 2 ವರ್ಷದ ಮಗು ಪ್ರಣೀಕ ಹಾಗೂ 5 ವರ್ಷದ ಸಾತ್ವಿಕ್ ಎಂಬ ಮಕ್ಕಳು ವಾಸವಾಗಿದ್ದರು. ನರಸಿಂಹ ಸಿದ್ದಿ ಅವರ ಪತ್ನಿ ಕ್ರಿಸ್ಟಿನ್ ಜೊತೆ ಅವರ ತಮ್ಮ ವೇದಾಂತ ಸಹ ಅಲ್ಲಿಯೇ ಉಳಿದು ಶಾಲೆಗೆ ಹೋಗುತ್ತಿದ್ದರು. ಸೀತಾ ಸಿದ್ದಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಈ ಆರು ಜನರ ಪಾಲಿಗೆ ಹೊಸ ಮನೆ ನಿರ್ಮಾಣ ಕನಸಿನ ಮಾತು.
ಭಾನುವಾರ ಮನೆ ಕುಸಿತದ ಮಾಹಿತಿ ಪಡೆದ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಾಯ ಅರಿತ ಅವರು ಕೂಡಲೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದು, ಮನೆ ಗೋಡೆ ಕುಸಿತದ ಆತಂಕದಲ್ಲಿದ್ದ ಆರೂ ಜನ ಗುರುವಾರವೇ ಯಲ್ಲಾಪುರಕ್ಕೆ ಬಂದು ಉದ್ಯಮನಗರದಲ್ಲಿ ಬಾಡಿಗೆ ಮನೆ ಹಿಡಿದಿದ್ದಾರೆ. ಆ ಮನೆ ಬಾಡಿಗೆ ಮೊತ್ತವೇ 3 ಸಾವಿರ ರೂ!
`ಕುಸಿತ ಕಂಡ ಮನೆಯ ಸರ್ಕಾರಿ ಮೌಲ್ಯವೇ 1.5 ಲಕ್ಷ ರೂಪಾಯಿ. ಶೇ 24ರಷ್ಟು ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದೇವೆ. ಮೊದಲಿನ ಆದೇಶದ ಪ್ರಕಾರ 4 ಸಾವಿರ ರೂ ದೊರೆಯುವುದು ಅನುಮಾನವಾಗಿತ್ತು. ಪ್ರಸ್ತುತ ಪರಿಷ್ಕೃತ ಆದೇಶ ಬಂದಿದ್ದು, ಅದರ ಪ್ರಕಾರ ಆ ಕುಟುಂಬದವರಿಗೆ 25 ಸಾವಿರ ರೂ ಸಿಗಬಹುದು. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಬಯಕೆಯಿದ್ದರೂ ನಿಯಮಾವಳಿಗಳ ಪ್ರಕಾರ ಹೆಚ್ಚಿನ ಪರಿಹಾರ ಒದಗಿಸುವುದು ಕಷ್ಟ\’ ಎಂದು ಕಂದಾಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.