ದಾಂಡೇಲಿ: ಕುಳಗಿ- ಅಂಬಿಕಾನಗರ ಪ್ರವೇಶ ಸಂಪರ್ಕಿಸುವ ಕುಳಗಿ ರಸ್ತೆಯ ಸೇತುವೆ ದುಸ್ಥಿತಿಯಲ್ಲಿದೆ.
1967ರಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಜನರ ನಿತ್ಯದ ಬದುಕಿನ ಜೊತೆ ಈ ಸೇತುವೆಯೂ ಬೆರತಿದೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ಸೇತುವೆ ದುರಸ್ತಿ ಮಾಡದ ಕಾರಣ ಅಪಾಯದ ಸ್ಥಿತಿಯಲ್ಲಿದೆ. ಸೇತುವೆಯ ಎರಡು ಬದಿಗಳಲ್ಲಿರುವ ತಡೆಗೋಡೆ ಸರಿಯಿಲ್ಲ. ತಡೆಗೋಡೆ ಅಲ್ಲಲ್ಲಿ ಬಿರುಕು ಮೂಡಿದ್ದು, ಕೆಲವು ತುಂಡಾಗಿ ಬಿದ್ದಿದೆ.
ಸೇತುವೆ ಪೂರ್ತಿ ಹೊಂಡಗಳಿoದ ಕೂಡಿದೆ. ಇದರಿಂದ ವಾಹನ ಸವಾರರ ಸಂಕಷ್ಟ ಅಷ್ಟಿಷ್ಟಲ್ಲ. ಸೇತುವೆ ತಳಭಾಗದಲ್ಲಿ ದೊಡ್ಡ ಪ್ರಮಾಣದ ಗಿಡ-ಗಂಟಿಗಳು ಬೆಳೆದಿವೆ.
ಬೆಳಗ್ಗೆ ಹಾಗೂ ಸಂಜೆ ವೇಳೆ ಸೇತುವೆ ಮೇಲೆ ನಡೆದಾಡುವುದು ಹಲವರ ಹವ್ಯಾಸ. ಇದರ ಜೊತೆ ತಡೆಗೋಡೆಗೆ ಒರಗಿಕೊಂಡು ಮೀನು ಹಿಡಿಯುವವರ ಸಂಖ್ಯೆ ಕಡಿಮೆಯೇನಿಲ್ಲ. ಕೋಗಿಲಬನ, ಕುಳಗಿ, ಮೃತ್ಯುಂಜಯ ನಗರದ ವಿದ್ಯಾರ್ಥಿಗಳು ನಿತ್ಯ ಸೇತುವೆ ಅಂಚಿನಲ್ಲಿ ನಡೆದು ಹೋಗುತ್ತಾರೆ. ಹೀಗಾಗಿ ತಡೆಗೋಡೆ ಮುರಿದರೆ ಅಪಾಯ ಖಚಿತ.