ಕುಮಟಾ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಕರ್ಕಿಯ ಪಿ. ವಿ. ಹಾಸ್ಯಗಾರ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರಿ ಕೆ ಗೋವಿಂದ ಭಟ್ಟರು ಭಾಜನರಾಗಿದ್ದಾರೆ.
ಈ ಪ್ರಶಸ್ತಿ 50ಸಾವಿರ ರೂಪಾಯಿ ಹಣ, ಸ್ಮರಣಿಕೆಯನ್ನು ಒಳಗೊಂಡಿದೆ. ಸೆಪ್ಟೆಂಬರ್ 1ರ ರವಿವಾರ ಮಧ್ಯಾಹ್ನ ಅಪರಾಹ್ನ 4 ಗಂಟೆಗೆ ಹೊನ್ನಾವರದ ಕರ್ಕಿಯ ಹವ್ಯಕ ಸಭಾಭವನದಲ್ಲಿ ನಡೆಯುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಯಕ್ಷಗಾನ ಸಂಶೋಧನಾ ಕೇಂದ್ರ, ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ ಸಂಸ್ಮರಣಾ ವೇದಿಕೆ, ಯಕ್ಷರಂಗ ಪತ್ರಿಕಾ ಬಳಗ, ಸಿರಿಕಲಾ ಮೇಳ, ಗಜಾನನ ಭಟ್ಟ, ಕಡತೋಕಮತ್ತು ಕರ್ಕಿ ಹಾಸ್ಯಗಾರ ಕುಟುಂಬದವರ ಸಹಕಾರದಲ್ಲಿ ಪಿ ವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಗೋವಿಂದ ಭಟ್ಟರ ಕಲಾಸೇವೆ
ಸೂರಿಕುಮೇರಿ ಗೋವಿಂದ ಭಟ್ಟರು ಯಕ್ಷಗಾನದ ಇತಿಹಾಸದಲ್ಲಿ ಅತಿಹೆಚ್ಚು ವೃತ್ತಿಮೇಳಗಳ ಪ್ರದರ್ಶಗಳಲ್ಲಿ ಪಾಲ್ಗೊಂಡ ಕಲಾವಿದ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಗೋವಿಂದ ಭಟ್ಟರು ಅನೇಕ ಶಿಷ್ಯರಿಗೆ ಗುರುವಾಗಿ, ಪ್ರಸಂಗಕರ್ತರಾಗಿ `ದಶಾವತಾರಿ\’ ಎಂದು ಗುರುತಿಸಿಕೊಂಡಿದ್ದಾರೆ.
ಸಭೆ ನಂತರ ಯಕ್ಷವೈಭವ
ಸನ್ಮಾನ, ಸಭಾ ಕಾರ್ಯಕ್ರಮದ ನಂತರ ಖ್ಯಾತ ಯಕ್ಷಗಾನ ಕಲಾವಿದರಿಂದ `ರುಕ್ಮಾಂಗದ ಚರಿತ್ರೆ\’ ಎಂಬ ಯಕ್ಷಗಾನ ನಡೆಯಲಿದೆ.
ಈ ಅಪರೂಪದ ಕಲಾ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!