ಯಲ್ಲಾಪುರ: ಪೊಲೀಸ್ ಠಾಣೆ ಬಳಿ ನಡೆದು ಹೋಗುತ್ತಿದ್ದ ಹುಬ್ಬಳ್ಳಿಯ ಹನುಮಂತ ಭಜಂತ್ರಿ (50) ಎಂಬಾತರಿಗೆ ಉತ್ತರ ಪ್ರದೇಶದ ಚಂದ್ರಬಾನ ಯಾದವ್ (37) ಎಂಬಾತ ಲಾರಿ ಡಿಕ್ಕಿ ಹೊಡೆದಿದ್ದು (Accident) ಹನುಮಂತ ಭಜಂತ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಸಾವನಪ್ಪಿದ ಹನುಮಂತ ಭಜಂತ್ರಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಹುಬ್ಬಳ್ಳಿ ಬಳಿಯ ಬಂಡವಾಡ ಜನತಾ ಪ್ಲಾಟಿನವರಾದ ಅವರು ಅಗಸ್ಟ 11ರ ಸಂಜೆ 6.45ಕ್ಕೆ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದರು. ಆಗ, ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಚಂದ್ರಬಾನ ಚೋಟೆವಾಲ ಯಾದವ್ ಎಂಬಾತ ಲಾರಿ ಗುದ್ದಿದ್ದರಿಂದ ಅಲ್ಲಿಯೇ ಹನುಮಂತ ಭಜಂತ್ರಿ ಕೊನೆ ಉಸಿರೆಳೆದಿದ್ದಾರೆ.
ಪೊಲೀಸ್ ಠಾಣೆಯಿಂದ 100 ಮೀ ದೂರದಲ್ಲಿ ಈ ಅಪಘಾತ ನಡೆದಿದೆ. ಈ ವಿಷಯ ತಿಳಿದ ಸಿಪಿಐ ರಮೇಶ ಹನಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಸೈ ನಿರಂಜನ ಹೆಗಡೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.