ಯಲ್ಲಾಪುರ: ಚಕ್ ಅಮಾನ್ಯ, ವಿವಾಹ ವಿಚ್ಚೇದನ, ಅಪಘಾತ ಪರಿಹಾರ, ಭೂ ಸ್ವಾಧೀನ ಸೇರಿ ರಾಜಿ ಆಗಬಹುದಾದ ಪ್ರಕರಣಗಳನ್ನು ತಳಹಂತದಲ್ಲಿಯೇ ಮುಗಿಸಿಕೊಳ್ಳುವುದಕ್ಕಾಗಿ ಯಲ್ಲಾಪುರ ನ್ಯಾಯಾಲಯ ಲೋಕ್ ಅದಾಲತ್ (Lok adalat) ಮೂಲಕ ಸೆಪ್ಟಂಬರ್ 14ರಂದು ಇನ್ನೊಂದು ಅವಕಾಶ ಕಲ್ಪಿಸಿದೆ.
ಕೊಲೆ, ಸುಲಿಗೆಯಂಥ ಕ್ರಿಮಿನಲ್ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಎರಡು ಕಡೆಯವರು ಪರಸ್ಪರ ಮಾತುಕಥೆ ಮೂಲಕ ನ್ಯಾಯಾಧೀಶರ ಮುಂದೆಯೇ ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಅನಗತ್ಯ ಕೋರ್ಟು – ಕಚೇರಿ ತಿರುಗಾಟದ ಸಮಯ, ವಕೀಲರ ಹಾಗೂ ನ್ಯಾಯಾಲಯದ ಶುಲ್ಕ ಉಳಿತಾಯವಾಗಲಿದೆ. ಇದಕ್ಕೆ ನ್ಯಾಯಾಧೀಶರ ಜೊತೆ ನ್ಯಾಯವಾದಿಗಳು ಸಹ ಕೈ ಜೋಡಿಸುತ್ತಿದ್ದಾರೆ.
ಹೀಗಾಗಿ `ರಾಜಿ ಆಗಬಹುದಾದ ಪ್ರಕರಣಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು\’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ ಬಿ ಹಳ್ಳಕಾಯಿ ಹೇಳಿದರು. ಲೋಕ ಅದಾಲತ್ ಪೂರ್ವಭಾವಿಯಾಗಿ ಸೋಮವಾರ ಸಂಜೆ ಪೊಲೀಸರು ಹಾಗೂ ಇನ್ನಿತರ ಅಧಿಕಾರಿಗಳ ಸಭೆ ನಡೆಸಿದ ಅವರು ಕಕ್ಷಿದಾರರ ಮನವೊಲೈಸುವಂತೆ ನ್ಯಾಯವಾದಿಗಳಿಗೆ ಸೂಚಿಸಿದರು. ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸವನಗೌಡ ಪಾಟೀಲ್ ಈ ವೇಳೆ ಹಾಜರಿದ್ದರು.