ಕಾರವಾರದ ಮುದುಗಾದಲ್ಲಿ ವಾಸವಾಗಿರುವ ವಂದನಾ ನಾಗರಾಜ ಹರಿಕಂತ್ರ (35) ಎಂಬಾತರಿಗೆ ಅವರ ಪತಿ ಜೊತೆ ಕುಟುಂಬದ 6 ಜನ ಸದಸ್ಯರು ವರದಕ್ಷಿಣೆಗಾಗಿ ಪೀಡಿಸಿ (Dowry Harassment) ಹಲ್ಲೆ ನಡೆಸಿದ್ದಾರೆ. ಸಿಲೆಂಡರ್ ಗ್ಯಾಸ್ ಸ್ಪೋಟಿಸಿ ಕೊಲೆಗೂ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾದ ಅವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
19 ಜುಲೈ 2018ರಲ್ಲಿ ಅಮದಳ್ಳಿ ವೀರಗಣಪತಿ ದೇವಸ್ಥಾನದಲ್ಲಿ ವಂದನಾ ಅಂಕೋಲಾ ಶಿರೂರು ಬೆಳಸೆಯ ನಾಗರಾಜ ಜಯರಾಂ ಹರಿಕಂತ್ರ ಅವರನ್ನು ವರಿಸಿದ್ದರು. ವಿವಾಹದ ವೇಳೆ ನಡೆದ ಮಾತುಕಥೆ ಪ್ರಕಾರ ವಂದನಾ ಕುಟುಂಬದವರು ವರದಕ್ಷಿಣೆಯಾಗಿ ಪ್ರಿಡ್ಜ್, ಟಿವಿ, ಗ್ರಾಂಡರ್, ಬಂಗಾರದ ಬ್ರೇಸ್ಲೈಟ್ ಹಾಗೂ 5 ಲಕ್ಷ ರೂ ಹಣವನ್ನು ವರನಿಗೆ ಕೊಡಬೇಕಿತ್ತು. ಇದಕ್ಕಾಗಿ ಗಂಡನ ಮನೆಯವರು ಪದೇ ಪದೇ ಪೀಡಿಸುತ್ತಿದ್ದರು. ಈ ನಡುವೆ ಮದುವೆಗೆ ಮಾಡಿದ್ದ 3 ಲಕ್ಷ ರೂ ಸಾಲ ಮಾಡಿದ್ದು, ಅದನ್ನು ಗಂಡನಮನೆಯವರು ವಂದನಾ ಬಳಿಯಿದ್ದ ಚಿನ್ನದ ಸರ ಅಡವಿಟ್ಟು ಚುಕ್ತಾ ಮಾಡಿದ್ದರು.
ಇದಾದ ನಂತರ ಉಳಿದ ಹಣ ಹಾಗೂ ವಸ್ತು ನೀಡುವಂತೆ ಪೀಡಿಸಿದ್ದು, ನೀಡದ ಕಾರಣ ಮನೆಬಿಟ್ಟು ಹೋಗುವಂತೆ ಬೈಯುತ್ತಿದ್ದರು. ವಂದನಾ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಬೇರೆ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಅವರು ಒಬ್ಬರೇ ಮನೆಯಲ್ಲಿದ್ದಾಗ ಕರೆಂಟ್ ಪ್ಯೂಸ್ ತೆಗೆದು ಹೆದರಿಸುವುದನ್ನು ಮಾಡುತ್ತಿದ್ದರು. ವಂದನಾ ಅವರು ಬಳಸುತ್ತಿದ್ದ ಸಿಲೆಂಡರ್ ಗ್ಯಾಸ್ ಸ್ಪೋಟಿಸಿ ಸಾಯಿಸುವ ಪ್ರಯತ್ನವನ್ನು ನಡೆಸಿದ್ದು, ಅಲ್ಲಿಂದ ವಂದನಾ ಪಾರಾಗಿದ್ದರು.
ಈ ನಡುವೆ ಜೂನ್ 2021ರಲ್ಲಿ ನಾಗರಾಜ ಜಯರಾಂ ಹರಿಕಂತ್ರ ಅವರ ಸಹೋದರ ಆನಂದು ಜಯರಾಂ ಹರಿಕಂತ್ರ ಮದುವೆ ಆಗಿದ್ದು, ಆತನ ಪತ್ನಿ ಪೂಜಾ ಸಹ ವಂದನಾ ಮೇಲೆ ಹಲ್ಲೆ ಮಾಡುವುದನ್ನು ರೂಢಿಸಿಕೊಂಡಿದ್ದರು. ಈ ಎಲ್ಲಾ ವಿಷಯದ ಬಗ್ಗೆ ಮದುವೆ ಮಾಡಿಸಿದ್ದ ಮಧ್ಯವರ್ತಿ ಗಂಗಾಧರ ತಿಮ್ಮ ಹರಿಕಂತ್ರ\’ರಿಗೆ ಹೇಳಿದಾಗ `ನನ್ನನ್ನು ಮದುವೆ ಆಗಿದ್ದೆಯಾ?\’ ಎಂದು ನಿಂದಿಸಿ ಬೈದಿದ್ದರು. 29 ಮೇ 2024ರಂದು ಸಹ ಈ ಕುಟುಂಬದವರೆಲ್ಲ ಸೇರಿ ವಂದನಾ ಮೇಲೆ ಮತ್ತೆ ದೈಹಿಕ ಹಲ್ಲೆ ನಡೆಸಿದ್ದರು.
ಈ ವೇಳೆ ವಂದನಾ ಪತಿಯ ಮೇಲೆ ಸಹ ಅವರ ಮಾವ ಜಯರಾಂ ಕೃಷ್ಣ ಹರಿಕಂತ್ರ (70) ಹಲ್ಲೆ ನಡೆಸಿದ್ದು, ಅದಾದ ಮೇಲೆ ಗಂಡ ಹೆಂಡತಿ ಇಬ್ಬರಿಗೂ ಶಿರೂರಿಗೆ ತೆರಳಿ ಬಾಡಿಗೆ ಮನೆ ಮಾಡಿದ್ದರು. ಆದರೆ, ಪತ್ನಿ ಮೇಲಿನ ಸಂಶಯ ಹಾಗೂ ವರದಕ್ಷಿಣೆ ಆಸೆಗೆ ಬಿದ್ದ ನಾಗರಾಜ ಹರಿಕಂತ್ರ ವಂದನಾ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರೆಸಿದ್ದು ಆಗ ಊರಿನವರು ಬಂದು ರಾಜಿ ಮಾಡಿಸಿದ್ದರು. ಇದಾದ ಮೇಲೆ ಅವರಿಬ್ಬರು ಕುಮಟಾದ ಬೆಟ್ಕುಳಿಗೆ ತೆರಳಿ ಅಲ್ಲಿ ಬಾಡಿಗೆ ಮನೆ ಮಾಡಿದ್ದರು. ಅಲ್ಲಿ ಸಹ ವರದಕ್ಷಿಣೆ ಕೊಡುವಂತೆ ನಾಗರಾಜ ಹರಿಕಂತ್ರ ಹಲ್ಲೆ ಮಾಡಿದ್ದರಿಂದ ವಂದನಾ ಆಸ್ಪತ್ರೆ ಸೇರಿದ್ದರು.
2024ರ ಫೆ 24ರಂದು ನಾಗರಾಜ ಹರಿಕಂತ್ರ ಸರಾಯಿ ಕುಡಿದು ವಂದನಾ ಮೇಲೆ ಮತ್ತೆ ಹಲ್ಲೆ ನಡೆಸಿದ್ದು, ಈ ಎಲ್ಲಾ ಬೆಳವಣಿಗೆಯಿಂದ ನೊಂದ ಅವರು ಮೀನುಗಾರಿಕೆ ನಡೆಸುವ ಪತಿ ನಾಗರಾಜ ಜಯರಾಂ ಹರಿಕಂತ್ರ (38) ಮಾವ ಜಯರಾಂ ಕೃಷ್ಣ ಹರಿಕಂತ್ರ (70) ಅತ್ತೆ ಬೀರು ಜಯರಾಂ ಹರಿಕಂತ್ರ (55) ಪತಿಯ ಸಹೋದರ ಆನಂದು ಜಯರಾಂ ಹರಿಕಂತ್ರ (35) ಇನ್ನೊಬ್ಬ ಸಹೋದರ ಸಂತೋಷ ಜಯರಾಂ ಹರಿಕಂತ್ರ (33) ನಾದಿನಿ ಪೂಜಾ ಆನಂದು ಹರಿಕಂತ್ರ (25) ಹಾಗೂ ಈ ಮದುವೆ ಮಾಡಿಸಿದ್ದ ಮಧ್ಯವರ್ತಿ ಗಂಗಾಧರ ತಿಮ್ಮ ಹರಿಕಂತ್ರ (44) ಎಂಬಾತರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.