ಸಿದ್ದಾಪುರ: ಮನೆಗೆ ಬೀಗ ಹಾಕಿ ಗದ್ದೆ ಕೆಲಸಕ್ಕೆ ಹೋಗಿದ್ದ ಮಹೇಶ ನಾಯ್ಕ ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ. ಬೀಗ ಹಾಕಿದ ನಂತರ ಚಾವಿಯನ್ನು ಅವರು ಕಿಟಕಿ ಪಕ್ಕ ಅಡಗಿಸಿ ಹೋಗಿದ್ದೇ ಕಳ್ಳತನಕ್ಕೆ ಕಾರಣ!
ತೆಳ್ಳಗೆ ಬೆಳ್ಳಗೆ ಇರುವ 28 ವರ್ಷದ ಮಹಿಳೆ ಅವರ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದು, ಆಕೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಗಸ್ಟ 12ರಂದು ಬೆಳಗ್ಗೆ ಬೇಡ್ಕಣಿಯ ಪುಟ್ಟೆನೆಕ್ಲುವಿನ ಮಹೇಶ ನಾಯ್ಕರು ಗದ್ದೆ ನಾಟಿಗೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಎಂದಿನ ರೂಢಿಯಂತೆ ಅದನ್ನು ಕಿಟಕಿ ಪಕ್ಕ ಅಡಗಿಸಿಟ್ಟಿದ್ದರು.
ಮಧ್ಯಾಹ್ನ 1.15ಕ್ಕೆ ಊಟಕ್ಕೆ ಮರಳಿದಾಗ ಮನೆಯ ಬಾಗಿಲು ತೆರೆದಿತ್ತು. ಒಳಗಿನ ದೀಪಗಳು ಉರಿಯುತ್ತಿದ್ದವು. ಮನೆ ಒಳಗೆ ಅಪರಿಚಿತ ಮಹಿಳೆಯೊಬ್ಬರು ಶೋಧ ನಡೆಸುತ್ತಿರುವುದು ಅವರಿಗೆ ಕಾಣಿಸಿತು. ಮಹೇಶ ನಾಯ್ಕ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಆ ಮಹಿಳೆ ಅಲ್ಲಿಂದ ಓಡಿ ಪರಾರಿಯಾಗಿದ್ದು, ಮಹೇಶ ನಾಯ್ಕ ಸಹ ಆಕೆಯ ಬೆನ್ನಟ್ಟಿದರು. ಆದರೆ, ಸಿಗಲಿಲ್ಲ.
ಮರಳಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿದ್ದವು. ಕಪಾಟಿನ ಬಾಗಿಲು ತೆರೆದು ಅಲ್ಲಿದ್ದ 1.23 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳ್ಳಿಯ ಪಾಲಾಗಿದ್ದವು. `ಅಂದಾಜು 28 ವರ್ಷದ ತೆಳ್ಳಗಿನ ಮಹಿಳೆ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದು, ಆಕೆಯನ್ನು ಪತ್ತೆ ಮಾಡಿ ತನ್ನ ಚಿನ್ನಾಭರಣ ಮರಳಿಸಿ\’ ಎಂದು ಮಹೇಶ ನಾಯ್ಕ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.