ಹಳಿಯಾಳ: ತಮ್ಮ ಜಮೀನಿನಿಂದ ಭತ್ತದ (Paddy) ತೆನೆ ಹೊತ್ತು ತರುತ್ತಿದ್ದ ಹವಗಿಯ ರೈತ (Farmer) ದೇವರತ್ನ ಶೀಥಲನಾಥ ಅಂಬಿಪ್ಪಿ (27) ಎಂಬಾತರನ್ನು ಅಡ್ಡಗಟ್ಟಿದ ನಾಗೇಂದ್ರ ಸಹದೇವ ಕರೆಂಜೆಕರ್ ಎಂಬಾತ ಕಡಗೋಲು ತೋರಿಸಿ ಜೀವ ಬೆದರಿಕೆ ಒಡ್ಡಿದ್ದು, ದೇವರತ್ನ ಅಂಬಿಪ್ಪಿ ಇದೀಗ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಕೆಸರೊಳ್ಳಿ ಗ್ರಾಮದಲ್ಲಿ ಹೊಲ ಹೊಂದಿರುವ ದೇವರತ್ನ ಅಂಬಿಪ್ಪಿ ಜುಲೈ 30ರಂದು ಹೊಲಕ್ಕೆ ಹೋಗಿ ಭತ್ತ ಕಟಾವು ಮಾಡಿದ್ದರು. ಅದನ್ನು ಹೊತ್ತು ತರುವಾಗ ಅಡ್ಡಗಟ್ಟಿದ ನಾಗೇಂದ್ರ ಸಹದೇವ ಕರೆಂಜೆಕರ್ `ಭತ್ತ ಏಕೆ ಕೊಯ್ದೆ?\’ ಎಂದು ಪ್ರಶ್ನಿಸಿದ್ದಾರೆ. ನಂತರ ದೇವರತ್ನ ಅಂಬಿಪ್ಪಿ ತಮ್ಮ ಜಮೀನಿನಲ್ಲಿದ್ದ ದನಗಳನ್ನು ಅಲ್ಲಿಂದ ಓಡಿಸುವಂತೆ ಸೂಚಿಸಿದ್ದಾರೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ನಾಗೇಂದ್ರ ಸಹದೇವ ಕರೆಂಜೆಕರ್ ಕುಡಗೋಲು ಎತ್ತಿ ಹಲ್ಲೆಗೆ ಯತ್ನಿಸಿದ್ದಾರೆ. `ಮತ್ತೆ ಇಲ್ಲಿ ಬಂದರೆ ಕಡಿದು ಹಾಕುವೆ\’ ಎಂದು ಬೆದರಿಸಿದ್ದಾರೆ.
ಇದರಿಂದ ಹೆದರಿದ ದೇವರತ್ನ ಅಂಬಿಪ್ಪಿ ಹಿರಿಯರ ಬಳಿ ಚರ್ಚಿಸಿ ಇದೀಗ ರಕ್ಷಣೆ ಕೋರಿ ಪೊಲೀಸ್ ದೂರು ನೀಡಿದ್ದಾರೆ.