ಉತ್ತರ ಕನ್ನಡ ಜಿಲ್ಲಾ ಜಿಲ್ಲಾ ಗ್ಯಾರಂಟಿ (Guarantee) ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸತೀಶ್ ಪಿ ನಾಯ್ಕ ಅಧ್ಯಕ್ಷ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಈಶ್ವರ ಕಾಂದೋ ಕಾರ್ಯದರ್ಶಿ. ಜೊತೆಗೆ 5 ಉಪಾಧ್ಯಕ್ಷರು ಈ ಸಮಿತಿಯಲ್ಲಿದ್ದು, 14 ಸದಸ್ಯರಿದ್ದಾರೆ. ಕಾರವಾರದ ಜಿಲ್ಲಾ ಪಂಚಾಯತದಲ್ಲಿನ ಕೊಠಡಿಯನ್ನು ಈ ಯೋಜನೆಯ ಕಚೇರಿಯನ್ನಾಗಿ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿನ `ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿ\’ ಗುರುವಾರ ಉದ್ಘಾಟನೆಯಾಗಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಇದನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು `ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಒಟ್ಟಾಗಿ ಶ್ರಮಿಸಿ ಪ್ರತಿಯೊಬ್ಬರಿಗೂ ತಲುಪಿಸಬೇಕು\’ ಎಂದು ಸೂಚಿಸಿದರು. `ಪ್ರಾಧಿಕಾರದ ಪ್ರತಿಯೊಬ್ಬ ಸದಸ್ಯರಿಗೆ ಸರ್ಕಾರ ಜವಾಬ್ದಾರಿ ನೀಡಲಿದೆ. ಆ ಜವಾಬ್ದಾರಿಯನ್ನು ಅರಿತು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಬೇಕು\’ ಎಂದವರು ಹೇಳಿದರು.
`ಪ್ರಾಧಿಕಾರದ ಸದಸ್ಯರು ತಾಲೂಕುವಾರು ಸಭೆ ಸೇರಿ ಸ್ಥಳೀಯ ಅಸಾಯಕರು, ಬಡ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರಕಿಸಿಕೊಡಬೇಕು. ಜೊತೆಗೆ ಸರ್ಕಾರದ ಇತರೆ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸಬೇಕು\’ ಎಂದರು.