ಯಲಾಪುರ ತಾಲೂಕಿನ ಹೊಳೆನಂದಿಕಟ್ಟಾ ಗೌಳಿವಾಡದ ಜನ್ನಿ ಬಾಬು ಹುಂಬೆ 2023-24ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 94.5ರ ಸಾಧನೆ ( Student achievement ) ಮಾಡಿದ್ದು, ಸಾಧಕ ವಿದ್ಯಾರ್ಥಿನಿಯನ್ನು ಗುರುತಿಸಿದ ರಾಜ್ಯ ದನಗರಗೌಳಿ ಯುವ ಸೇನೆಯವರು ಶುಕ್ರವಾರ ಅವರ ಮನೆಗೆ ತೆರಳಿ ಗೌರವಿಸಿದರು.
`ದಟ್ಟ ಕಾಡಿನಲ್ಲಿರುವ ಹೊಳೆನಂದಿಕಟ್ಟಾ ಊರಿಗೆ ಬಸ್ ಸಂಪರ್ಕ ಸಹ ಸರಿಯಾಗಿಲ್ಲ. ನಿತ್ಯ 7ಕಿಮೀ ನಡೆದು ಕಿರವತ್ತಿ ತಲುಪುವುದು ಹಾಗೂ ಅಲ್ಲಿ ಬಸ್ಸು ಹಿಡಿದು ಯಲ್ಲಾಪುರ ಕಾಲೇಜು ತಲುಪುವುದು ಜನ್ನಿ ಬಾಬು ಹುಂಬೆ ಅವರಿಗೆ ಅನಿವಾರ್ಯವಾಗಿತ್ತು. ಮನೆಯಲ್ಲಿನ ಬಡತನ, ನಿತ್ಯ ನಡಿಗೆಯ ಆಯಾಸದ ಕಷ್ಟ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ಓದಿ ಸಾಧನೆ ಮಾಡಿರುವುದು ಇಡೀ ದನಗರ ಗೌಳಿ ಸಮುದಾಯಕ್ಕೆ ಹೆಮ್ಮೆಯ ವಿಷಯ\’ ಎಂದು ರಾಜ್ಯ ದನಗರಗೌಳಿ ಯುವ ಸೇನೆ ಅಧ್ಯಕ್ಷ ಸಂತೋಷ್ ವರಕ್ ಮೆಚ್ಚುಗೆ ವ್ಯಕ್ತಪಡಿಸಿದರು.
`ಜನ್ನಿ ಬಾಬು ಹುಂಬೆ ಅವರ ಸಾಧನೆ ಇತರರಿಗೆ ಮಾದರಿ. ಅವರ ರೀತಿ ಇತರೆ ವಿದ್ಯಾರ್ಥಿಗಳು ಸಹ ಸಾಧನೆ ಮಾಡಬೇಕು. ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ರಾಜ್ಯ ದನಗರಗೌಳಿ ಯುವ ಸೇನೆ ಅಭಿನಂದಿಸುತ್ತದೆ\’ ಎಂದವರು ಹೇಳಿದರು. ಯುವ ಸೇನೆಯ ಸದಸ್ಯರಾದ ಬಮ್ಮು ಫೋಂಡೆ, ಲಕ್ಷ್ಮಣ ಕೋಕರೆ ಕರಡೊಳ್ಳಿ, ಸಮೀಧಾ ಫೌಂಡೇಷನ್ ಸದಸ್ಯ ರಾಮು ಮಲಗೊಂಡೆ, ಊರಿನವರಾದ ಧೋಂಡು ಪಟಕಾರೆ, ಧೋಂಡು ಕಾತ್ರಟ್, ರಾಮು ಎಡಗೆ, ಬಾಬು ಹುಂಬೆ ಇತರರು ಇದ್ದರು. ಬಮ್ಮು ಫೋಂಡೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.