`ಭೂಕುಸಿತಗಳು (landslide) ಮತ್ತು ಪ್ರವಾಹ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಭವದ ಆಧಾರದ ಮೂಲಕ ತಯಾರಿಸಿದ ಕಾರ್ಯಸಾಧ್ಯ ಕ್ರಿಯಾ ಯೋಜನೆಗಳು ಅನುಕೂಲ\’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ, ಪ್ರಕೃತಿ ವಿಕೋಪದಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಾಮರ್ಥ್ಯ ಬಲವರ್ಧನೆ ಹಾಗೂ ದುರಂತದ ಸಂದರ್ಭದಲ್ಲಿ ಮಾನಸಿಕ ಆರೈಕೆ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
`ಜಿಲ್ಲೆಯಲ್ಲಿ ಆಗಸ್ಟ್ 2ನೇ ವಾರದಿಂದ ಸೆಪ್ಟೆಂಬರ್ 2ನೇ ವಾರದವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತದ ವತಿಯಂದ ಪೂರ್ವ ಸನ್ನದ್ಧತೆ ಕೈಗೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಮುಂದೆ ಸಂಭವಿಸಬಹುದಾದ ವಿಕೋಪಗಳ ಕುರಿತಂತೆ ಮುನೆಚ್ಚರಿಕೆ ವಹಿಸಿದ್ದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗಲಿದೆ ಹೀಗಾಗಿ ಎಲ್ಲಾ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ಅಗತ್ಯ ಸಹಕಾರ ನೀಡಬೇಕು\’ ಎಂದರು.
`ಸಮಗ್ರ ತರಬೇತಿ ಮತ್ತು ಸಂವೇದನೆಯ ಮೂಲಕ ವಿಪತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಸರ್ಕಾರಿ ಅಧಿಕಾರಿಗಳು, ಮಧ್ಯಸ್ಥಗಾರರು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸುವ ಮೂಲಕ, ಜಿಲ್ಲೆಯು ಭವಿಷ್ಯದ ವಿಪತ್ತುಗಳ ಪರಿಣಾಮಗಳನ್ನು ನಿರ್ವಹಿಸಲು ಮತ್ತು ತಗ್ಗಿಸಲು, ಅದರ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಈ ತರಬೇತಿ ಸಹಾಯವಾಗಲಿದೆ\’ ಎಂದರು.
`ವಿಪತ್ತು ನಿರ್ವಹಣೆಗೆ ಸಂಬoಧಿಸಿದoತೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ತಾಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಶೇಷವಾಗಿ ಭೂಕುಸಿತಗಳು ಮತ್ತು ಪ್ರವಾಹಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳ ಬಗ್ಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಲಿದೆ\’ ಎಂದರು.