ಸರ್ಕಾರಿ ಕಚೇರಿಯಲ್ಲಿರುವ ಕಡತಗಳನ್ನು ಇಬ್ಬರು ಕಳ್ಳತನ ಮಾಡಿದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ ಗಾವಡೆ ಪೊಲೀಸ್ ದೂರು ನೀಡಿದ್ದು, ಇಬ್ಬರ ವಿರುದ್ಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಅಗಸ್ಟ 16ರ ಬೆಳಗ್ಗೆ 11.37ರ ಸುಮಾರಿಗೆ ಯಲ್ಲಾಪುರ ಪಟ್ಟಣ ಪಂಚಾಯತಗೆ ನುಗ್ಗಿದ ಗಜಾನನ ನಾಯಕ ಹಾಗೂ ಸಚೀನ್ ಬಳ್ಕೂರು ಎಂಬಾತರು 12.20ರ ಅವಧಿಯಲ್ಲಿ ಕಂದಾಯ ನಿರೀಕ್ಷಕರ ಕೊಠಡಿಯಲ್ಲಿದ್ದ 3 ದಾಖಲೆಗಳನ್ನು ಅಪಹರಿಸಿದ್ದಾರೆ. ಟೇಬಲ್ ಮೇಲಿದ್ದ ಕೆಲ ಕಾಗದ-ಪತ್ರಗಳು ಕಾಣೆಯಾಗಿರುವ ಬಗ್ಗೆ ಅರಿತ ಅಧಿಕಾರಿಗಳು ಗಜಾನನ ನಾಯಕ ಎಂಬಾತರಿಗೆ ಅವರಿಗೆ ಫೋನ್ ಮಾಡಿ ವಿಚಾರಿಸಿದ್ದು, ನಂತರ ಅವರು ಕದ್ದ ದಾಖಲೆಗಳನ್ನು ಮರಳಿಸಿದ್ದಾರೆ. ಈ ದಾಖಲೆಗಳಲ್ಲಿ ಕೆಲ ತಿದ್ದುಪಡೆಯಾಗಿರುವ ಬಗ್ಗೆ ಪಟ್ಟಣದಲ್ಲಿ ದಟ್ಟವಾದ ವದಂತಿ ಹಬ್ಬಿದೆ. ಇದರ ಜೊತೆ ಇನ್ನಷ್ಟು ದಾಖಲೆಗಳು ಕಾಣೆಯಾಗಿರುವ ಬಗ್ಗೆ ಜನ ಮಾತನಾಡುತ್ತಿದ್ದಾರೆ.
ಸಾಕಷ್ಟು ವಿಚಾರ ಮಾಡಿದ ನಂತರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಅಗಸ್ಟ 17ರ ಶನಿವಾರ ರಾತ್ರಿ 8.15ಕ್ಕೆ ಈ ಇಬ್ಬರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಈ ಇಬ್ಬರು ದಾಖಲೆ ಕಳ್ಳತನ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ದೂರು ನೀಡಲು ತಡವಾದ ಬಗ್ಗೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಪೊಲೀಸರಿಗೆ ಸಮಜಾಯಿಶಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪಿಸ್ಐ ನಿರಂಜನ ಹೆಗಡೆ ತನಿಖೆ ಶುರು ಮಾಡಿದ್ದಾರೆ.