ಕುಮಟಾದ ದೀವಗಿಯಲ್ಲಿರುವ ಹಾಲಕ್ಕಿ ಸಭಾಭವನದಲ್ಲಿ ಅಗಸ್ಟ 20ರಂದು ಜಿಲ್ಲಾ ಮಟ್ಟದ ಜನಸ್ಪಂದನ ಸಭೆ ನಡೆಯಲಿದ್ದು, ಅಗಸ್ಟ 19ರ ಸಂಜೆ 7.30ರವರೆಗೂ ಅಲ್ಲಿನ ಗ್ರಾ ಪಂ ಅಧ್ಯಕ್ಷ ಜಗದೀಶ ಭಟ್ಟರಿಗೆ ಆಹ್ವಾನವಿರಲಿಲ್ಲ!
ಈ ವಿಷಯ ಅರಿತ ಅಧಿಕಾರಿಗಳು ನಂತರ ವಾಟ್ಸಪ್ ಮೂಲಕ ಆಮಂತ್ರಣ ಪತ್ರಿಕೆ ರವಾನಿಸಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸ್ಥಳ ದೀವಗಿ ಪಂಚಾಯಿತಿ ಕಚೇರಿಯ ಕೂಗಳತೆ ದೂರದಲ್ಲಿದೆ. ಜಿಲ್ಲಾಡಳಿತದ ಅಧಿಕಾರಿಗಳೆಲ್ಲರೂ ನಾಲ್ಕು ದಿನ ಮೊದಲಿನಿಂದಲೇ ಇಲ್ಲಿ ಓಡಾಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆಗಮನಕ್ಕೆ ಎಲ್ಲಾ ಬಗೆಯ ಸಿದ್ಧತೆ ನಡೆಯುತ್ತಿದೆ. ಆದರೆ, ಆ ಭಾಗದ ಮುಖ್ಯ ವ್ಯಕ್ತಿಯಾಗಿರುವ ಗ್ರಾ ಪಂ ಅಧ್ಯಕ್ಷರಿಗೆ ಮಾಹಿತಿ ನೀಡಲು ಮಾತ್ರ ಎಲ್ಲರೂ ಮರೆತಿದ್ದಾರೆ!
ಗ್ರಾಮ ಪಂಚಾಯತ ಕಚೇರಿಗೆ ಆಗಮಿಸಿಯಾದರೂ ಗೌರವಯುತವಾಗಿ ಆಮಂತ್ರಣ ಪತ್ರಿಕೆ ನೀಡಬೇಕಿತ್ತು. ಅದರ ಬದಲು ಹಿಂದಿನ ದಿನ ಸಂಜೆ ವಾಟ್ಸಪ್ ಮೂಲಕ ನೀಡಿ ಅಗೌರವ ತೋರಲಾಗಿದೆ ಎಂಬುದು ಜನರ ದೂರು.