ಹಣಕಾಸಿನ ಅವ್ಯವಹಾರ, ಟೆಂಡರ್ ನೀಡದೇ ಸಾಮಗ್ರಿ ಖರೀದಿ, ಒಂದೇ ಕಾಮಗಾರಿಗೆ ಬೇರೆ ಬೇರೆ ಅನುದಾನ ದುರುಪಯೋಗ, ಕಾಮಗಾರಿ ನಡೆಸದೇ ಹಣ ಪಾವತಿ ಸೇರಿ 15 ಆರೋಪಗಳನ್ನು ಎದುರಿಸುತ್ತಿದ್ದ ಅಂಕೋಲಾ ವಂದಿಗೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ (PDO) ಗಿರಿಶ್ ಎನ್ ನಾಯಕ ವಿರುದ್ಧ 9 ಆರೋಪಗಳು ಸಾಬೀತಾಗಿದೆ. ಈ ಹಿನ್ನಲೆ ಅವರಿಗೆ ಶಿಕ್ಷೆ ವಿಧಿಸುವಂತೆ ಜಿಲ್ಲಾ ಪಂಚಾಯತ ಪಂಚಾಯತ ರಾಜ್ ಆಯುಕ್ತರಿಗೆ ಪತ್ರ ಬರೆದಿದೆ.
ಗಿರಿಶ್ ನಾಯಕ ಅವರು ದಶಕಗಳ ಕಾಲ ಅಂಕೋಲಾ-ಯಲ್ಲಾಪುರ ಗಡಿಭಾಗದ ಡೋಂಗ್ರಿ ಗ್ರಾಮ ಪಂಚಾಯತದಲ್ಲಿ ಅಭಿವೃದ್ಧಿ (PDO) ಅಧಿಕಾರಿಯಾಗಿದ್ದರು. ಅದಾದ ನಂತರ ವಂದಿಗೆ ಗ್ರಾಮ ಪಂಚಾಯತಗೆ ಅವರು ವರ್ಗವಾಗಿದ್ದರು. ಗ್ರಾ ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ನಡೆಯದ ಬಗ್ಗೆ ಆಕ್ಷೇಪಿಸಿ ಊರಿನವರು ಗ್ರಾ ಪಂ ಕಚೇರಿಗೆ ನಿರಂತರವಾಗಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಆಗ, ಶಿವರಾಮ ಗಾಂವ್ಕರ್ ಕನಕನಳ್ಳಿ ಅವರಿಗೆ ದೊರೆತ ದಾಖಲೆಗಳಲ್ಲಿ ಲಕ್ಷಾಂತರ ರೂ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆಗಾಗಿ ದೂರು ನೀಡಿದ್ದರು. ಆದರೆ, `14 ರೂಪಾಯಿ ತೆರಿಗೆ ಪಾವತಿಯಲ್ಲಿ ಆದ ಲೋಪದಿಂದ ನಾನು ಶಿಕ್ಷೆ ಅನುಭವಿಸುವ ಹಾಗಾಗಿದೆ\’ ಎಂದು ಗಿರಿಶ್ ನಾಯಕ ಅಳಲು ತೋಡಿಕೊಂಡಿದ್ದಾರೆ!
2023ರಲ್ಲಿ ಅವರ ವಿರುದ್ಧ ಅಧಿಕೃತ ದೂರು ದಾಖಲಾದ ಕಾರಣ ಜಿಲ್ಲಾ ಪಂಚಾಯತದಿ0ದ ನೋಟಿಸು ಜಾರಿಯಾಗಿತ್ತು. ನಂತರ ವಿಚಾರಣೆ ನಡೆದಿದ್ದು, ಲೆಕ್ಕಪರಿಶೋಧನಾ ವರದಿಯಲ್ಲಿ ಸಹ ಅಕ್ರಮ ಕಂಡು ಬಂದಿತು. ಪ್ರಸ್ತುತ ವಿಚಾರಣಾ ವರದಿಯಲ್ಲಿ ಅವರ ವಿರುದ್ಧ 9 ಆರೋಪಗಳು ದೃಢವಾಗಿದೆ. ಈ ಹಿನ್ನಲೆ ಜಿಲ್ಲಾ ಪಂಚಾಯತದಿ0ದ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ರವಾನೆಯಾಗಿದೆ.
`ನನ್ನದೂ ಯಾವುದೇ ತಪ್ಪಿಲ್ಲ. ಯಾವುದೇ ರೀತಿ ಹಣಕಾಸಿನ ದುರುಪಯೋಗ ಆಗಲಿಲ್ಲ. ಪ್ರವಾಹದ ತುರ್ತು ಪರಿಸ್ಥಿತಿ ವೇಳೆ ಆದೇಶ ಪ್ರತಿ ಇಲ್ಲದಿದ್ದರೂ ಮಾನವೀಯ ನೆಲೆಯಲ್ಲಿ ದೋಣಿ ತರಿಸಿ ಸೇವೆ ನೀಡಿದ್ದೆ. ಹೀಗೆ ಆದೇಶ ಪ್ರತಿ ಇಲ್ಲದೇ ಸೇವೆ ನೀಡಿದ್ದು ಸಹ ಅಪರಾಧ ಎಂದು ಬಿಂಬಿಸಲಾಗಿದೆ. ಜನರಿಂದ ವಸೂಲಿ ಮಾಡಿದ 14 ರೂ ತೆರಿಗೆ ಸರ್ಕಾರಕ್ಕೆ ಪಾವತಿಸುವಲ್ಲಿ ತಡವಾಗಿದ್ದು, ಅದಕ್ಕೂ ಶಿಕ್ಷೆ ವಿಧಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ನಾನೂ ಕಾನೂನು ಹೋರಾಟ ನಡೆಸುವೆ\’ ಎಂದು ಪಿಡಿಓ ಗಿರಿಶ್ ನಾಯಕ ಪ್ರತಿಕ್ರಿಯಿಸಿದರು.